ಬೆಂಗಳೂರು : ಕ್ಯಾಸಿನೊ ಇಂಟಿಗ್ರೇಶನ್ ಹೆಸರಿನಲ್ಲಿ ನಟಿಯರ ದುರ್ಬಳಕೆ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಿನಿ ಕಲಾವಿದರ ದುರ್ಬಳಕೆ, ವಿದೇಶಿ ಪ್ರವಾಸದ ವೇಳೆ ದೊಡ್ಡ ಅಕ್ರಮ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ರಾಜ್ಯದ ಕೆಲ ಹಿರಿಯ ಕಲಾವಿದರು, ಸೀರಿಯಲ್ ನಟಿಯರು ಹಾಗೂ ಸಿನಿ ವಲಯದ ವ್ಯಕ್ತಿಗಳ ವಿರುದ್ಧ ಮಾದಕವಸ್ತು ಮಾರಾಟ, ಮಾನವ ಅಕ್ರಮ ಸಾಗಣೆ, ಲೈಂಗಿಕ ಶೋಷಣೆ, ಅಪ್ರಾಪ್ತ ಮಕ್ಕಳ ಸಾಗಣೆ ಸಂಬಂಧ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದು, ಮಾಜಿ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ವಿರುದ್ಧವೂ ದೂರು ನೀಡಿದ್ದಾರೆ. ನಟಿಯರಿಗೆ ಕೀನ್ಯಾ (ನೈರೋಬಿ), ವಿಯೆಟ್ನಾಂ ಹಾಗೂ ಥೈಲ್ಯಾಂಡ್ ಪ್ರವಾಸವನ್ನು ಮನರಂಜನೆ ಹಾಗೂ ಉದ್ಯೋಗದ ನೆಪದಲ್ಲಿ ಆಯೋಜಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿದೇಶಿ ಪ್ರವಾಸಗಳ ಹಿಂದೆ ಅಕ್ರಮದ ನಂಟು ಇರಬಹುದು ಎಂಬ ಶಂಕೆ ದೂರಿನಲ್ಲಿ ವ್ಯಕ್ತವಾಗಿದೆ.
ಕೆಲ ದಾಖಲೆಗಳು ಹಾಗೂ ಪ್ರಮೋಷನ್ ವಿಡಿಯೋಗಳ ಆಧಾರದಲ್ಲಿ ಕಲ್ಲಹಳ್ಳಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತನಿಖೆಯ ಉದ್ದೇಶಕ್ಕಾಗಿ ಕೆಲ ನಟಿಯರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ವಿಡಿಯೋ ಮೂಲಕ ನಟಿ ರಾಗಿಣಿ ನೈರೋಬಿ, ಕೀನ್ಯಾಕ್ಕೆ ಬರುವಂತೆ ಆಹ್ವಾನ ನೀಡಿರುವುದು, ಡಿಸೆಂಬರ್ 11ರಿಂದ 13ರವರೆಗೆ ವಿಯೆಟ್ನಾಂ ಪ್ರವಾಸಕ್ಕೆ ಇದೇ ತಂಡದಿಂದ ವಿಡಿಯೋ ಬಿಡುಗಡೆ ಮಾಡಿರುವುದು ದೂರಿನಲ್ಲಿ ಉಲ್ಲೇಖವಾಗಿದೆ. ವಿದೇಶ ಪ್ರವಾಸಕ್ಕೆ ತೆರಳಿದ ಯುವತಿಯ ಪೋಷಕರು ದೂರುದಾರರಿಗೆ ಮಾಹಿತಿ ನೀಡಿದ್ದು, ಯುವತಿಯ ದುರ್ಬಳಕೆ ನಡೆದಿರಬಹುದು ಎಂಬ ಆತಂಕವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಕುಟುಂಬದ ಗೌರವ ಮತ್ತು ಮರ್ಯಾದೆ ಕಾರಣದಿಂದ ಮಾಹಿತಿ ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆ ವಿದೇಶಿ ಪ್ರವಾಸ ಆಯೋಜನೆ ಹಾಗೂ ಪ್ರವಾಸ ಕೈಗೊಂಡವರ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಇದೇ ವೇಳೆ, ತುಪ್ಪದ ಹುಡುಗಿಗೆ ಮತ್ತೆ ಡ್ರಗ್ ನಂಟಿನ ಆರೋಪ ಕೇಳಿಬಂದಿದ್ದು, ಈ ಹಿಂದೆ ಡ್ರಗ್ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದ ರಾಗಿಣಿ ಹೆಸರು ಇದೀಗ ಮತ್ತೆ ಮಾದಕವಸ್ತು ಪ್ರಕರಣದಲ್ಲಿ ಕೇಳಿಬಂದಿದೆ. ಇತ್ತ ಡ್ರಗ್ ಕೇಸಿನಲ್ಲಿ ಈ ಹಿಂದೆ ಅರೆಸ್ಟ್ ಆಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಮಸ್ತಾನ್ ಚಂದ್ರ ಹೆಸರು ಕೂಡ ದೂರಿನಲ್ಲಿ ಉಲ್ಲೇಖವಾಗಿದೆ. ಪೊಲೀಸರು ದೂರಿನ ಆಧಾರದಲ್ಲಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬರಬೇಕಿದೆ.
ಇದನ್ನೂ ಓದಿ : ಮಾದಕ ವಸ್ತು, ಮಾನವ ಕಳ್ಳಸಾಗಣೆ ಆರೋಪ | ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ದಿನೇಶ್ ಕಲ್ಲಹಳ್ಳಿ ಮನವಿ



















