ಪುತ್ತೂರು: ಜೆರಾಕ್ಸ್ ಅಂಗಡಿಯೊಳಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಿಯೋಗವೊಂದು ಪುತ್ತೂರು ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿತು.
ವಿಧಾನಪರಿಷತ್ ಸದಸ್ಯ ಕಿಶೋರ್ ಪುತ್ತೂರು ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದ ನಿಯೋಗವು ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ಚರ್ಚಿಸಿತು.
ಜೆರಾಕ್ಸ್ ಅಂಗಡಿಯೊಳಗೆ ನುಗ್ಗಿ ಮಹಿಳೆಯರ ಮೇಲೂ ಹಲ್ಲೆ ನಡೆಸಲಾಗಿದೆ. ಆದರೆ ಆರೋಪಿಗಳ ವಿರುದ್ಧ ದುರ್ಬಲ ಸೆಕ್ಷನ್ಗಳನ್ನು ದಾಖಲಿಸಲಾಗಿದೆ ಎಂದು ಬಿಜೆಪಿ ನಿಯೋಗ ಆರೋಪಿಸಿತು. ಹಲ್ಲೆಗೊಳಗಾದ ಮಹಿಳೆಯ ವಿರುದ್ಧ ಜಾಮೀನುರಹಿತ ಸೆಕ್ಷನ್ ದಾಖಲಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತು.
ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧವೂ ಜಾಮೀನುರಹಿತ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಜೆರಾಕ್ಸ್ ವಿಚಾರವಾಗಿ ಅಂಗಡಿಗೆ ಬಂದಿದ್ದ ಮಹಿಳೆಯರು ಅಂಗಡಿ ಮಾಲಕಿಗೆ ಅವಾಚ್ಯವಾಗಿ ಬೈದಿದ್ದಾರೆ. ಇದರಿಂದ ಆಕ್ರೋಶಗೊಂಡ ಆಕೆಯ ಪುತ್ರ, ಜೆರಾಕ್ಸ್ ಅಂಗಡಿಗೆ ಬಂದಿದ್ದ ಮಹಿಳೆಯರೊಂದಿಗೆ ಇದ್ದ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಗುಂಪೊಂದನ್ನು ಕರೆತಂದು ಅಂಗಡಿಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ನಿಯೋಗ ಆರೋಪಿಸಿದೆ.
ಈ ವೇಳೆ ಪೊಲೀಸ್ ಜೀಪ್ನ್ನೂ ಗುಂಪು ಅಲುಗಾಡಿಸಿ ಭಯದ ವಾತಾವರಣ ನಿರ್ಮಿಸಿತ್ತು ಎಂದು ನಿಯೋಗ ತಿಳಿಸಿದೆ. ಆದರೆ ಪೊಲೀಸ್ ಇಲಾಖೆ ಪ್ರಕರಣದಲ್ಲಿ “ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬಣ್ಣ” ಎಂಬ ರೀತಿಯಲ್ಲಿ ವರ್ತಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳು ಮುಂದುವರಿದರೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಬಿಜೆಪಿ ನಿಯೋಗ ಎಚ್ಚರಿಕೆ ನೀಡಿತು.
ಪ್ರಕರಣದಲ್ಲಿ ಎರಡೂ ಕಡೆಯವರ ವಿರುದ್ಧ ಸಮಾನವಾಗಿ ಕಾನೂನು ಕ್ರಮ ಕೈಗೊಂಡು, ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.



















