ಬೆಂಗಳೂರು: ವಿಧಾನಸಭೆ ಅಧಿವೇಶನ ಮುಗಿದ ಬೆನ್ನಲ್ಲೇ ಸಚಿವರು ಹಾಗೂ ಶಾಸಕರು ತಮ್ಮ ತಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಪಡೆಯುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಜೆಟ್ ಹಿನ್ನೆಲೆಯಲ್ಲಿ ಸಮುದಾಯವನ್ನು ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡು ಸರಣಿ ಸಭೆಗಳಿಗೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ದಲಿತ ಸಚಿವರು ಹಾಗೂ ಶಾಸಕರ ಸಭೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಲಿಂಗಾಯತ ಸಚಿವರು ಮತ್ತು ಶಾಸಕರ ಸಭೆ ಕೂಡ ನಡೆಸುತ್ತಿದ್ದಾರೆ. ಈ ಸಭೆಗಳಲ್ಲಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಪಡೆಯುವ ತಂತ್ರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಮುದಾಯದ ನಿಗಮ-ಮಂಡಳಿ ನೇಮಕ ವಿಚಾರವಾಗಿ ಇಲಾಖೆಗಳಿಗೆ ಹೆಚ್ಚಿನ ಅನುದಾನ ತರುವ ಮಾರ್ಗಗಳ ಬಗ್ಗೆ ಸಮುದಾಯದ ನಾಯಕರು ಚರ್ಚೆ ನಡೆಸಿದ್ದಾರೆ. ಜೊತೆಗೆ ಸಚಿವ ಸಂಪುಟ ಪುನಾರಚನೆ ಕುರಿತು ಕೂಡ ಅನೌಪಚಾರಿಕ ಚರ್ಚೆಗಳು ನಡೆದಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅನುದಾನ ಪಡೆಯುವ ಗುರಿಯೊಂದಿಗೆ ಸಚಿವರು ಮೆಗಾ ಪ್ಲ್ಯಾನ್ ರೂಪಿಸಿಕೊಂಡಿದ್ದಾರೆ. ಅನುದಾನ ವಿಚಾರವಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಕ್ಕೂ ಸಚಿವರು, ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಸಮುದಾಯದ ಸರಣಿ ಸಭೆಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಯತ್ನ ನಡೆಯುತ್ತಿದ್ದು, ತಮ್ಮ ಸಮುದಾಯದ ಸ್ವಾಮೀಜಿಗಳ ಮೂಲಕವೂ ಅನುದಾನಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ. ಇಲಾಖೆ ಸುಧಾರಣೆ ಮತ್ತು ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದೊಂದಿಗೆ ಸಚಿವರು ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಸಚಿವರು ಹಾಗೂ ಶಾಸಕರ ಟಾರ್ಗೆಟ್ ಅನುದಾನವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ : ಇಂದಿನಿಂದ ಮೂರು ದಿನ ಎಡೆದೊರೆ ನಾಡಲ್ಲಿ ರಾಯಚೂರು ಜಿಲ್ಲಾ ಉತ್ಸವ!



















