ನವದೆಹಲಿ : ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಅಬಕಾರಿ ಸುಂಕವು ಫೆ.1ರ ಭಾನುವಾರದಿಂದ ಜಾರಿಗೆ ಬಂದಿದ್ದು, ಪರಿಣಾಮವಾಗಿ ದೇಶಾದ್ಯಂತ ಸಿಗರೇಟ್ ಬೆಲೆಗಳು ಗಗನಕ್ಕೇರಿವೆ. ಪ್ರಮುಖ ಬ್ರ್ಯಾಂಡ್‌ಗಳ ಸಿಗರೇಟ್ ಪ್ಯಾಕೆಟ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಧೂಮಪಾನಿಗಳ ಜೇಬಿಗೆ ಭಾರಿ ಕತ್ತರಿ ಬಿದ್ದಂತಾಗಿದೆ.
ವಿತರಕರು ನೀಡಿರುವ ಮಾಹಿತಿಯ ಪ್ರಕಾರ, 10 ಸಿಗರೇಟ್‌ಗಳ ಒಂದು ಪ್ಯಾಕೆಟ್ ಮೇಲೆ ಕನಿಷ್ಠ 22 ರಿಂದ 25 ರೂಪಾಯಿಗಳಷ್ಟು ಬೆಲೆ ಏರಿಕೆಯಾಗಿದೆ. 76 ಮಿ.ಮೀ ಉದ್ದದ ಪ್ರೀಮಿಯಂ ಸಿಗರೇಟ್‌ಗಳ ಬೆಲೆಯು ಪ್ಯಾಕೆಟ್‌ಗೆ 50 ರಿಂದ 55 ರೂಪಾಯಿಗಳವರೆಗೆ ಹೆಚ್ಚಾಗಿದೆ. ಉದಾಹರಣೆಗೆ, ಈ ಹಿಂದೆ 95 ರೂಪಾಯಿಗೆ ಸಿಗುತ್ತಿದ್ದ ‘ವಿಲ್ಸ್ ನೇವಿ ಕಟ್’ (10 ಸ್ಟಿಕ್‌ಗಳ ಪ್ಯಾಕೆಟ್) ಈಗ 120 ರೂ. ಆಸುಪಾಸಿಗೆ ತಲುಪುವ ಸಾಧ್ಯತೆಯಿದೆ. ಹಾಗೆಯೇ, ‘ಗೋಲ್ಡ್ ಫ್ಲೇಕ್ ಲೈಟ್ಸ್’ ಮತ್ತು ‘ವಿಲ್ಸ್ ಕ್ಲಾಸಿಕ್’ ನಂತಹ 84 ಮಿ.ಮೀ ಉದ್ದದ ಸಿಗರೇಟ್ ಪ್ಯಾಕೆಟ್‌ಗಳ ಬೆಲೆ 170 ರೂಪಾಯಿಯಿಂದ 220-225 ರೂ.ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಜಿಎಸ್‌ಟಿ ಮಂಡಳಿಯು ಈ ಹಿಂದೆ ಜಾರಿಯಲ್ಲಿದ್ದ ಪರಿಹಾರ ಸೆಸ್ (Compensation Cess) ಬದಲಿಗೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲು ನಿರ್ಧರಿಸಿತ್ತು. ಡಿಸೆಂಬರ್‌ನಲ್ಲಿ ಸಂಸತ್ತು ಅನುಮೋದಿಸಿದ ಈ ಹೊಸ ತೆರಿಗೆಯು ಫೆಬ್ರವರಿ 1ರಿಂದ ಜಾರಿಗೆ ಬಂದಿದೆ. ಹೊಸ ನಿಯಮದಂತೆ, 65 ಮಿ.ಮೀ ವರೆಗಿನ ಫಿಲ್ಟರ್ ಸಿಗರೇಟ್‌ಗಳ ಮೇಲೆ ಪ್ರತಿ ಸ್ಟಿಕ್‌ಗೆ ಸುಮಾರು 2.10 ರೂ. ಮತ್ತು 70-75 ಮಿ.ಮೀ ಉದ್ದದ ಪ್ರೀಮಿಯಂ ಸಿಗರೇಟ್‌ಗಳ ಮೇಲೆ ಪ್ರತಿ ಸ್ಟಿಕ್‌ಗೆ 5.4 ರೂ. ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಗರಿಷ್ಠ ಸುಂಕವಾದ ಪ್ರತಿ ಸ್ಟಿಕ್‌ಗೆ 8.50 ರೂ.ಗಳನ್ನು ಕೇವಲ ಅಸಾಮಾನ್ಯ ವಿನ್ಯಾಸದ ಸಿಗರೇಟ್‌ಗಳಿಗೆ ಸೀಮಿತಗೊಳಿಸಲಾಗಿದೆ.
ಮಾರುಕಟ್ಟೆಯಲ್ಲಿ ಕೃತಕ ಅಭಾವದ ಆತಂಕ
ಬೆಲೆ ಏರಿಕೆಯ ಬೆನ್ನಲ್ಲೇ ಹಲವು ಸಿಗರೇಟ್ ಕಂಪನಿಗಳು ಹಳೆಯ ಬೆಲೆಯ ಸ್ಟಾಕ್‌ಗಳನ್ನು ಬಿಡುಗಡೆ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಹೊಸ ತೆರಿಗೆ ದರದ ಅಡಿಯಲ್ಲಿ ಬಿಲ್ಲಿಂಗ್ ಪ್ರಕ್ರಿಯೆ ಮುಗಿದ ನಂತರವೇ ಹೊಸ ಬೆಲೆಯ ಸ್ಟಾಕ್‌ಗಳು ಮಾರುಕಟ್ಟೆಗೆ ಬರಲಿವೆ. ಚಿಲ್ಲರೆ ವ್ಯಾಪಾರಿಗಳು ಸದ್ಯ ಇರುವ ಹಳೆಯ ಸ್ಟಾಕ್‌ಗಳನ್ನು 40 ಪ್ರತಿಶತ ಜಿಎಸ್‌ಟಿ ದರದಲ್ಲಿ ಬಿಲ್ಲಿಂಗ್ ಮಾಡುತ್ತಿದ್ದಾರೆ. ತಿಂಗಳ ಅಂತ್ಯದ ವೇಳೆಗೆ ಹೊಸ ಎಂಆರ್‌ಪಿ (MRP) ಹೊಂದಿರುವ ಪ್ಯಾಕೆಟ್‌ಗಳು ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಲಭ್ಯವಾಗಲಿವೆ ಎಂದು ವಿತರಕರು ತಿಳಿಸಿದ್ದಾರೆ.
ಅಕ್ರಮ ಸಾಗಾಟದ ಭೀತಿ
ಈ ಹಠಾತ್ ಬೆಲೆ ಏರಿಕೆಯಿಂದಾಗಿ ಸಿಗರೇಟ್ ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನಗಳ ಹಾವಳಿ ಹೆಚ್ಚಾಗಬಹುದು ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನ ವಿತರಕರ ಒಕ್ಕೂಟ (AICPDF) ಎಚ್ಚರಿಸಿದೆ. ಕಾನೂನುಬದ್ಧವಾಗಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದರಿಂದ ಸಣ್ಣ ಕಿರಾಣಿ ಅಂಗಡಿಗಳ ವ್ಯಾಪಾರದ ಮೇಲೆ ಹೊಡೆತ ಬೀಳಲಿದೆ. ಆನ್‌ಲೈನ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಪೈಪೋಟಿಯ ನಡುವೆ, ತಂಬಾಕು ಉತ್ಪನ್ನಗಳ ಬೆಲೆ ಏರಿಕೆಯು ಪ್ರಾಮಾಣಿಕ ಚಿಲ್ಲರೆ ವ್ಯಾಪಾರಿಗಳ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ ಎಂದು ಒಕ್ಕೂಟದ ಅಧ್ಯಕ್ಷ ಡಿ. ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ವಿವಾದ | ನ್ಯಾಯಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ!



















