ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ನಡುವಿನ ಸಂಘರ್ಷ ತಾರಕಕ್ಕೇರಿ, ಅಂತಿಮವಾಗಿ ಬಾಂಗ್ಲಾ ತಂಡ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದಿದೆ. ಈ ಹೈಡ್ರಾಮಾ ನಡುವೆ, ಬಾಂಗ್ಲಾದೇಶಕ್ಕೆ ಸಾಲಿಡಾರಿಟಿ (Solidarity) ತೋರಿಸುವ ನೆಪದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಾನೂ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿತ್ತು. ಆದರೆ, ಇದೆಲ್ಲವೂ ಕೇವಲ ನಾಟಕವಷ್ಟೇ ಎಂದು ಈಗ ಸಾಬೀತಾಗಿದೆ. ಪಾಕಿಸ್ತಾನ ಎಂದಿಗೂ ಟೂರ್ನಿಯಿಂದ ಹಿಂದೆ ಸರಿಯುವ ಧೈರ್ಯವನ್ನೇ ಮಾಡಿರಲಿಲ್ಲ ಎಂಬುದು ಬಟಾಬಯಲಾಗಿದೆ.
ಬಾಯಲ್ಲಿ ಬೆದರಿಕೆ, ಜೇಬಲ್ಲಿ ಟಿಕೆಟ್!
ವರದಿಗಳ ಪ್ರಕಾರ, ಫೆಬ್ರವರಿ 2ರಂದೇ ಕೊಲಂಬೊಗೆ ಹಾರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಮಾನದ ಟಿಕೆಟ್‌ಗಳನ್ನು ಮೊದಲೇ ಬುಕ್ ಮಾಡಿಟ್ಟುಕೊಂಡಿತ್ತು. ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ಮಾತುಗಳನ್ನಾಡುತ್ತಲೇ, ಒಳಗೆ ತನ್ನ ಪ್ರಯಾಣದ ಸಿದ್ಧತೆಗಳನ್ನು ಗುಟ್ಟಾಗಿ ಮಾಡಿಕೊಂಡಿತ್ತು. ಒಂದು ವೇಳೆ ಪಾಕಿಸ್ತಾನ ನಿಜವಾಗಿಯೂ ಟೂರ್ನಿಯನ್ನು ಬಹಿಷ್ಕರಿಸಿದ್ದರೆ, ಅದು ಐಸಿಸಿ (ICC) ಜೊತೆಗಿನ ಸಂಬಂಧವನ್ನು ಶಾಶ್ವತವಾಗಿ ಹಾಳುಮಾಡಿಕೊಳ್ಳುತ್ತಿತ್ತು ಮತ್ತು ಭಾರಿ ಆರ್ಥಿಕ ನಷ್ಟವನ್ನೂ ಅನುಭವಿಸಬೇಕಾಗುತ್ತಿತ್ತು. ಹೀಗಾಗಿಯೇ ಅದು ಅಧಿಕೃತವಾಗಿ ಬಹಿಷ್ಕಾರದ ಬಗ್ಗೆ ಎಲ್ಲೂ ಬರೆದುಕೊಟ್ಟಿರಲಿಲ್ಲ.
ತ್ರಿಪಕ್ಷೀಯ ಒಪ್ಪಂದದ ಅನಿವಾರ್ಯತೆ
ಪಾಕಿಸ್ತಾನದ ಈ ‘ಬಾಲ ಮುದುರುವ’ ತಂತ್ರಕ್ಕೆ ಪ್ರಮುಖ ಕಾರಣ 2025ರಲ್ಲಿ ನಡೆದ ಒಂದು ಒಪ್ಪಂದ. ಬಿಸಿಸಿಐ (BCCI), ಪಿಸಿಬಿ ಮತ್ತು ಐಸಿಸಿ ನಡುವೆ ನಡೆದ ಈ ತ್ರಿಪಕ್ಷೀಯ ಒಪ್ಪಂದದ ಪ್ರಕಾರ, 2027ರವರೆಗಿನ ಐಸಿಸಿ ಟೂರ್ನಿಗಳಲ್ಲಿನ ಎಲ್ಲಾ ಭಾರತ-ಪಾಕಿಸ್ತಾನ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಬೇಕು. ಪ್ರಸ್ತುತ ಪಾಕಿಸ್ತಾನದ ಎಲ್ಲಾ ವಿಶ್ವಕಪ್ ಪಂದ್ಯಗಳು ಶ್ರೀಲಂಕಾದಲ್ಲೇ ನಿಗದಿಯಾಗಿವೆ. ಹೀಗಿರುವಾಗ, ಯಾವ ಆಧಾರದ ಮೇಲೆ ಪಾಕಿಸ್ತಾನ ಟೂರ್ನಿಯನ್ನು ಅಥವಾ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಸಾಧ್ಯ? ಎಂಬ ಪ್ರಶ್ನೆಗೆ ಪಾಕ್ ಬಳಿ ಉತ್ತರವಿಲ್ಲ.
ಕಾಸಿಗಾಗಿ ಕಿಸಬಾಯಿ: ಆರ್ಥಿಕ ಲೆಕ್ಕಾಚಾರ
ಕ್ರಿಕೆಟ್ ಜಗತ್ತಿನಲ್ಲಿ ಭಾರತ-ಪಾಕಿಸ್ತಾನ ಪಂದ್ಯವೆಂದರೆ ಅದು ಕೇವಲ ಆಟವಲ್ಲ, ಅದೊಂದು ಹಣದ ಹೊಳೆ. ಐಸಿಸಿ ಕೂಡ ತನ್ನ ಖಜಾನೆ ತುಂಬಿಸಿಕೊಳ್ಳಲು ಈ ಎರಡು ತಂಡಗಳು ಮುಖಾಮುಖಿಯಾಗುವಂತೆ ವೇಳಾಪಟ್ಟಿ ರೂಪಿಸುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆರ್ಥಿಕ ಸ್ಥಿತಿ ಈಗ ಹದಗೆಟ್ಟಿದ್ದು, ಇಂತಹ ದೊಡ್ಡ ವೇದಿಕೆಯಿಂದ ಬರುವ ಆದಾಯವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಅದಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಹಾಗೂ ಆ ದೇಶದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ (Mohsin Naqvi) ಅವರಿಗೆ ರಾಜಕೀಯ ಮತ್ತು ಹಣಕಾಸಿನ ಲಾಭ-ನಷ್ಟದ ಅರಿವಿದೆ. “ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ ಮತ್ತು ಐಸಿಸಿ ಸಂಬಂಧ ಚೆನ್ನಾಗಿರಬೇಕು,” ಎಂದು ಅವರು ಪಾಕ್ ಪ್ರಧಾನಿಗೆ ತಿಳಿಸಿರುವುದು ಇದನ್ನು ಪುಷ್ಠೀಕರಿಸುತ್ತದೆ.
ಒಟ್ಟಾರೆಯಾಗಿ, ಬಾಂಗ್ಲಾ ಪರ ನಿಂತು ವಿಶ್ವಕಪ್‌ಗೆ ಬೆದರಿಕೆ ಹಾಕಿದ್ದು ಕೇವಲ ಪ್ರಚಾರದ ಗಿಮಿಕ್ ಅಷ್ಟೇ. ಫೆಬ್ರವರಿ 7ರಿಂದ ಆರಂಭವಾಗುವ ಟೂರ್ನಿಯಲ್ಲಿ ಪಾಕಿಸ್ತಾನ ಯಾವುದೇ ತಕರಾರಿಲ್ಲದೆ ಶ್ರೀಲಂಕಾದಲ್ಲಿ ಕಣಕ್ಕಿಳಿಯುವುದು ಈಗ ಖಚಿತವಾಗಿದೆ.
ಇದನ್ನೂ ಓದಿ : ರವಿಶಾಸ್ತ್ರಿ ಸಾರಥ್ಯದ ‘ಪ್ರೊ10’ ಕ್ರಿಕೆಟ್ ಟೂರ್ನಿ ಮುಂದೂಡಿಕೆ | ಹೊಸ ದಿನಾಂಕ ಯಾವಾಗ?



















