ಬೆಂಗಳೂರು : ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಬೆಂಗಳೂರಿನ ಇತಿಹಾಸ ಪ್ರಸಿದ್ದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸಿದ್ದು, ಈ ವಿಸ್ಮಯವನ್ನ ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿಯಂದು ನಡೆಯುವ ಪ್ರಕೃತಿಯ ಈ ವಿಸ್ಮಯ ನೋಡಲು ಭಕ್ತ ಸಾಗರವೇ ಗಂಗಾಧರೇಶ್ವರನ ಸನ್ನಿಧಿಯಲ್ಲಿ ನೆರೆದಿತ್ತು. ಗವಿಗಂಗಾಧರೇಶ್ವರನಿಗೆ ಸಂಜೆ 5 ಗಂಟೆ 2 ನಿಮಿಷಕ್ಕೆ ಸೂರ್ಯ ರಶ್ಮಿಯ ಸ್ಪರ್ಶವಾಗಬೇಕಿತ್ತು. ಆದ್ರೆ ಸಮಯದಲ್ಲಿ ಬದಲಾವಣೆಯಾಯಿತು. 5 ಗಂಟೆ 17 ನಿಮಿಷದಿಂದ ಶಿವಲಿಂಗಕ್ಕೆ ಭಾಸ್ಕರನ ಸ್ಪರ್ಶವಾಗಲು ಶುರುವಾಯಿತು.
ಮೊದಲು ದೇಗುಲದ ಹಂಸ ದ್ವಾರದ ಮೂಲಕ ನಂದಿಯನ್ನ ಸ್ಪರ್ಶಿಸಿದ ಸೂರ್ಯ ರಶ್ಮಿ, ಬಳಿಕ ನಂದಿಯ ಕೊಂಬಿನ ಮೂಲಕ ಹಾದುಹೋಗಿ ಈಶ್ವರನ ಪೀಠ ಸ್ಪರ್ಶಿಸಿದೆ. ನಂತರ ನಿಧಾನವಾಗಿ ಶಿವಲಿಂಗ ಸ್ಪರ್ಶಿಸಿದ್ದು, ಈ ವಿಸ್ಮಯವನ್ನ ಭಕ್ತಗಣ ಕಣ್ತುಂಬಿಕೊಂಡಿದೆ. ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶಿಸುತ್ತಲೇ ಗಂಗಾಧರನಿಗೆ ದೀಪಾರಾಧನೆ ಪ್ರಾರಂಭವಾಯಿತು.
ಇದನ್ನೂ ಓದಿ : ಸಂಕ್ರಾಂತಿ ಹಬ್ಬದಂದೇ ಖರ್ತನಾಕ್ ಕಳ್ಳರ ಕೈಚಳಕ | ಮಹಿಳೆಯ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿ



















