ಇಸ್ಲಾಮಾಬಾದ್: ಕಳೆದ ವರ್ಷ ನವೆಂಬರ್‌ನಲ್ಲಿ ಸಿಖ್ ಯಾತ್ರಾರ್ಥಿಗಳ ಗುಂಪಿನೊಂದಿಗೆ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿಯೇ ಉಳಿದುಕೊಂಡು ಮತಾಂತರಗೊಂಡು ವಿವಾಹವಾಗಿದ್ದ ಸರಬ್ಜೀತ್ ಕೌರ್ ಎಂಬ ಭಾರತೀಯ ಮಹಿಳೆಯ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಆಡಿಯೋದಲ್ಲಿ ಆಕೆ ತಾನು ಪಾಕಿಸ್ತಾನದಲ್ಲಿ ಅತ್ಯಂತ ಸಂಕಷ್ಟದಲ್ಲಿದ್ದೇನೆ ಎಂದು ಅಲವತ್ತುಕೊಂಡಿದ್ದು, ಹೇಗಾದರೂ ಮಾಡಿ ತನ್ನನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಭಾರತದಲ್ಲಿರುವ ತನ್ನ ಪತಿಯೊಂದಿಗೆ ಮಾತನಾಡುತ್ತಾ, ತಾನು ದೊಡ್ಡ ತಪ್ಪು ಮಾಡಿರುವುದಾಗಿ ಆಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಯಾತ್ರೆ, ನಾಪತ್ತೆ ಮತ್ತು ಮತಾಂತರ
ಸರಬ್ಜೀತ್ ಕೌರ್ ಅವರು ನವೆಂಬರ್ 4, 2025ರಂದು ಗುರುನಾನಕ್ ದೇವ್ ಅವರ ಪ್ರಕಾಶ್ ಗುರ್ಪೂರಬ್ ಆಚರಣೆಯಲ್ಲಿ ಭಾಗವಹಿಸಲು ಪಾಕಿಸ್ತಾನದ ನಂಕಾನಾ ಸಾಹಿಬ್‌ಗೆ ತೆರಳಿದ್ದರು. ನವೆಂಬರ್ 13 ರಂದು ಎಲ್ಲಾ ಯಾತ್ರಿಗಳೊಂದಿಗೆ ಭಾರತಕ್ಕೆ ಮರಳಬೇಕಿದ್ದ ಅವರು, ಗುಂಪಿನಿಂದ ನಾಪತ್ತೆಯಾಗಿದ್ದರು. ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ನೂರ್ ಹುಸೇನ್’ ಎಂದು ಹೆಸರು ಬದಲಾಯಿಸಿಕೊಂಡಿರುವುದು ಮತ್ತು ಲಾಹೋರ್ ಸಮೀಪದ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಎಂಬಾತನನ್ನು ವಿವಾಹವಾಗಿರುವುದು ಬೆಳಕಿಗೆ ಬಂದಿತ್ತು.
ಕೊನೆಯ ಕ್ಷಣದಲ್ಲಿ ಸ್ಥಗಿತಗೊಂಡ ಹಸ್ತಾಂತರ ಪ್ರಕ್ರಿಯೆ
ಸರಬ್ಜೀತ್ ಅವರನ್ನು ಭಾರತಕ್ಕೆ ಮರಳಿ ಕಳುಹಿಸಲು ಪಾಕಿಸ್ತಾನ ಸರ್ಕಾರ ಜನವರಿ 6 ರಂದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ವಾಘಾ ಗಡಿಯ ಮೂಲಕ ಅವರನ್ನು ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಆದರೆ, ದಾಖಲೆಗಳ ಸಮಸ್ಯೆಯ ಕಾರಣ ನೀಡಿ ಕೊನೆಯ ಕ್ಷಣದಲ್ಲಿ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. ಅಂದಿನಿಂದ ಆಕೆಯ ಕಾನೂನುಬದ್ಧ ಸ್ಥಾನಮಾನದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಂತಾಗಿದ್ದು, ಆಕೆಯ ವೀಸಾ ಅವಧಿಯೂ ಮುಗಿದಿರುವುದರಿಂದ ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿದಂತಾಗಿದೆ.
ಆಡಿಯೋ ಕ್ಲಿಪ್‌ನಲ್ಲಿರುವ ಆತಂಕಕಾರಿ ವಿಷಯಗಳು
ವೈರಲ್ ಆಗಿರುವ ಆಡಿಯೋದಲ್ಲಿ ಸರಬ್ಜೀತ್ ತಾನು ಅಲ್ಲಿ ಪ್ರತಿಯೊಂದು ಪೈಸೆಗೂ ಪರದಾಡುತ್ತಿರುವುದಾಗಿ ಮತ್ತು ತನಗೆ ಸರಿಯಾದ ಬಟ್ಟೆಗಳೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. “ನನ್ನ ಮಕ್ಕಳನ್ನು ನಾನು ಕಷ್ಟಪಟ್ಟು ಬೆಳೆಸಿದ್ದೇನೆ, ನನಗೆ ಅವರ ಬಳಿಗೆ ಹೋಗಬೇಕು” ಎಂದು ಆಕೆ ಹೇಳುತ್ತಿರುವುದು ಕೇಳಿಸುತ್ತದೆ. ಅಲ್ಲದೆ, ತನಗೆ ಅಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಈ ಆಡಿಯೋ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲವಾದರೂ, ಇದು ಭಾರತೀಯ ಅಧಿಕಾರಿಗಳ ಗಮನ ಸೆಳೆದಿದ್ದು, ಆಕೆಯ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.
ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದ ಭಾರತೀಯ ಮಹಿಳೆ ಬಂಧನ



















