ಬರ್ಮಿಂಗ್‌ಹ್ಯಾಮ್ : ಇಂಗ್ಲೆಂಡ್‌ನ ಪಶ್ಚಿಮ ಮಿಡ್‌ಲ್ಯಾಂಡ್ಸ್ ಪ್ರದೇಶದ ಪ್ರಮುಖ ನಗರವಾದ ಬರ್ಮಿಂಗ್‌ಹ್ಯಾಮ್‌ನ ನಿವಾಸಿಗಳು ಅಪರೂಪದ ಮತ್ತು ವಿಸ್ಮಯಕಾರಿ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ. ನಗರದಲ್ಲಿ ರಾತ್ರಿ ಹೊತ್ತು ಆಕಾಶವು ದಿಢೀರನೆ ಗುಲಾಬಿ ಮತ್ತು ನೇರಳೆ ಬಣ್ಣದ ಮಿಶ್ರಣದಂತೆ ಕಂಗೊಳಿಸತೊಡಗಿತು. ಈ ಅದ್ಭುತ ನೋಟವನ್ನು ಕಂಡ ನಿವಾಸಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಸುಂದರ ದೃಶ್ಯವು ಇಂಟರ್ನೆಟ್ ಲೋಕದಲ್ಲಿ ಹಲವು ವಿಲಕ್ಷಣ ಅನುಮಾನ-ವದಂತಿಗಳಿಗೆ ದಾರಿ ಮಾಡಿಕೊಟ್ಟಿದೆ.

ಆಕಾಶವು ಗುಲಾಬಿ ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹತ್ತಾರು ಊಹೆಗಳನ್ನು ಹರಿಬಿಟ್ಟಿದ್ದಾರೆ. ಕೆಲವರು ಇದು ಏಲಿಯನ್‌ಗಳ (ಅನ್ಯಗ್ರಹ ಜೀವಿಗಳು) ದಾಳಿಯ ಮುನ್ಸೂಚನೆ ಎಂದರೆ, ಇನ್ನು ಕೆಲವರು ಅಮೆರಿಕದ ಡೆಮೋಕ್ರಾಟ್‌ಗಳು ಹೊಸ ವೈರಸ್ ಅನ್ನು ಗಾಳಿಯಲ್ಲಿ ಹರಡುತ್ತಿದ್ದಾರೆ ಎಂದು ವಾದಿಸಿದ್ದಾರೆ. ವಿಚಿತ್ರವೆಂದರೆ, ಇದು ಜೀಸಸ್ ಭೂಮಿಗೆ ಮರಳಿ ಬರುತ್ತಿರುವ ಸಂಕೇತ ಅಥವಾ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿರುವುದರಿಂದ ಜಗತ್ತು ಗುಣಮುಖವಾಗುತ್ತಿದೆ ಎಂಬುದಕ್ಕೆ ದೇವರಿತ್ತ ಸೂಚನೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇದಕ್ಕೆ ಸಾವಿರಾರು ಲೈಕ್ ಗಳೂ ಬಂದಿವೆ.

ವಿಜ್ಞಾನದ ವಿವರಣೆ ಏನು?
ಈ ನಿಗೂಢ ಗುಲಾಬಿ ಬಣ್ಣದ ಹಿಂದೆ ಯಾವುದೇ ಅಲೌಕಿಕ ಶಕ್ತಿಗಳಿಲ್ಲ, ಬದಲಿಗೆ ಸರಳವಾದ ವಿಜ್ಞಾನ ಅಡಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಇತ್ತೀಚೆಗೆ ಬಿದ್ದಿದ್ದ ತಾಜಾ ಹಿಮವು ಈ ದೃಶ್ಯದ ಸೃಷ್ಟಿಗೆ ಪ್ರಮುಖ ಕಾರಣ. ವಿಜ್ಞಾನದ ಪ್ರಕಾರ, ತಾಜಾ ಹಿಮವು ತನ್ನ ಮೇಲೆ ಬೀಳುವ ಬೆಳಕನ್ನು ಶೇ.95ರಷ್ಟು ಪ್ರತಿಫಲಿಸುವ ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ವೇಳೆ ನಗರದಲ್ಲಿ ಮೋಡಗಳು ಕೆಳಮಟ್ಟದಲ್ಲಿದ್ದ ಕಾರಣ ಮತ್ತು ವಾತಾವರಣದ ಸ್ಥಿತಿಯು ಬೆಳಕಿನ ಚದುರುವಿಕೆಗೆ ಪೂರಕವಾಗಿದ್ದ ಕಾರಣ ಹಿಮದ ಮೇಲೆ ಬಿದ್ದ ಕೃತಕ ಬೆಳಕು ಮೋಡಗಳಿಗೆ ಪ್ರತಿಫಲಿಸಿ ಇಡೀ ಆಕಾಶವು ಗುಲಾಬಿ ಬಣ್ಣದಂತೆ ಗೋಚರಿಸಿದೆ.

ಅಲ್ಲದೆ, ಆಕಾಶಕ್ಕೆ ಈ ಗುಲಾಬಿ ರಂಗು ನೀಡಿದ್ದು ಯಾವುದೋ ವೈರಸ್ ಅಲ್ಲ, ಬದಲಾಗಿ ಸ್ಥಳೀಯ ಫುಟ್ಬಾಲ್ ಕ್ರೀಡಾಂಗಣದ ಎಲ್‌ಇಡಿ ದೀಪಗಳು ಎಂಬುದು ಈಗ ದೃಢಪಟ್ಟಿದೆ. ‘ಹೆಡ್ನೆಸ್‌ಫೋರ್ಡ್ ಟೌನ್ ಎಫ್‌ಸಿ’ ಫುಟ್ಬಾಲ್ ಕ್ಲಬ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕ್ರೀಡಾಂಗಣದ ಹುಲ್ಲು ಬೆಳೆಯಲು ಮತ್ತು ಚೇತರಿಸಿಕೊಳ್ಳಲು ಬಳಸುವ ವಿಶೇಷ ಗುಲಾಬಿ ಬಣ್ಣದ ಎಲ್‌ಇಡಿ ಪಿಚ್ ಲೈಟ್‌ಗಳು ಆಕಾಶದಲ್ಲಿ ಈ ಚಮತ್ಕಾರವನ್ನು ಸೃಷ್ಟಿಸಿವೆ ಎಂದು ತಿಳಿಸಿದೆ. ಈ ಬೆಳಕು ಹಿಮ ಮತ್ತು ಮೋಡಗಳ ಮೇಲೆ ಪ್ರತಿಫಲಿಸಿದಾಗ ದೂರದಿಂದ ನೋಡುವವರಿಗೆ ಅದು ಉತ್ತರ ಧ್ರುವದ ಅರೋರಾ ಅಥವಾ ಯಾವುದೋ ನಿಗೂಢ ವಿದ್ಯಮಾನದಂತೆ ಕಂಡಿದೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದ ಏಲಿಯನ್ ದಾಳಿ ಮತ್ತು ವೈರಸ್ ಹರಡುವಿಕೆಯಂತಹ ವದಂತಿಗಳಿಗೆ ಫುಟ್ಬಾಲ್ ಮೈದಾನದ ದೀಪಗಳ ಸತ್ಯವು ತೆರೆ ಎಳೆದಿದೆ.
ಇದನ್ನೂ ಓದಿ : ಸ್ಯಾಲರಿ ಕ್ರೆಡಿಟ್ ಆದ 2-3 ದಿನದಲ್ಲೇ ಖಾಲಿ ಆಗುತ್ತಿದೆಯೇ? 70/10/10/10 ಸೂತ್ರ ಪಾಲಿಸಿ



















