ಬೆಂಗಳೂರು : ಎಟಿಎಂಗಳ ವಿಸ್ತೃತ ರೂಪವು ಆಟೋಮೇಟೆಡ್ ಟೆಲ್ಲರ್ ಮೆಷಿನ್ ಎಂದಾದರೂ, ಅವುಗಳನ್ನು ಎನಿ ಟೈಮ್ ಮನಿ ಎಂದೇ ಕರೆಯಲಾಗುತ್ತದೆ. 10 ವರ್ಷಗಳ ಹಿಂದೆಯೇ ದೇಶದ ಜನರಿಗೆ ಎಟಿಎಂಗಳು ಮಿನಿ ಬ್ಯಾಂಕ್‌ಗಳಾಗಿದ್ದವು. ದುಡ್ಡು ವಿತ್ ಡ್ರಾ ಮಾಡುವುದು, ಖಾತೆಗೆ ಜಮೆ ಮಾಡುವುದು, ಮಿನಿ ಸ್ಟೇಟ್ ಮೆಂಟ್ ಪಡೆಯುವುದು ಸೇರಿ ಹಲವು ಸೇವೆಗಳನ್ನು ನೀಡುವ ತಾಣಗಳಾಗಿದ್ದವು. ಆದರೆ, ಭಾರತದಲ್ಲಿ ಮುಂದೊಂದು ದಿನ ಎಟಿಎಂಗಳೇ ಇಲ್ಲದಿರುವ ಕಾಲ ಬರಬಹುದು ಎಂಬುದು ಆರ್‌ಬಿಐ ವರದಿಯಿಂದ ತಿಳಿದುಬಂದಿದೆ.
ಹೌದು, ಆರ್‌ಬಿಐ ವರದಿ ಪ್ರಕಾರ, ದೇಶದಲ್ಲಿ 2024-25ನೇ ಹಣಕಾಸು ವರ್ಷದಲ್ಲಿ 2,360 ಎಟಿಎಂಗಳನ್ನು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. ದೇಶದಲ್ಲಿ ಒಟ್ಟು 2,53,417 ಎಟಿಎಂಗಳು ಇದ್ದವು. ಇವುಗಳ ಸಂಖ್ಯೆಯು ಒಂದೇ ವರ್ಷದಲ್ಲಿ 2,51,057ಕ್ಕೆ ಇಳಿಕೆಯಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹೋಲಿಸಿದರೆ, ಖಾಸಗಿ ಬ್ಯಾಂಕ್ ಗಳೇ ಹೆಚ್ಚಿನ ಪ್ರಮಾಣದ ಎಟಿಎಂಗಳನ್ನು ಸ್ಥಗಿತಗೊಳಿಸಿವೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ, ಸಣ್ಣ ಗೂಡಂಗಡಿಯಿಂದ ಶಾಪಿಂಗ್ ಮಾಲ್ ವರೆಗೆ ಪ್ರತಿ ಕಡೆಯೂ ಯುಪಿಐ ಮೂಲಕವೇ ಯುಪಿಐ ಮೂಲಕವೇ ಪೇಮೆಂಟ್ ಮಾಡಲಾಗುತ್ತಿದೆ. 10 ರೂಪಾಯಿಯ ಟೀ ಕುಡಿದರೂ ಯುಪಿಐ ಮೂಲಕ ಹಣ ಪಾವತಿಸಲಾಗುತ್ತಿದೆ. ಇದರಿಂದಾಗಿ ಜನರಿಗೆ ನಗದಿನ ಅವಶ್ಯಕತೆ ಜಾಸ್ತಿ ಇಲ್ಲ. ಹಾಗಾಗಿ, ಹೆಚ್ಚಿನ ಜನ ಎಟಿಎಂಗಳನ್ನೇ ಬಳಸುತ್ತಿಲ್ಲ. ಇದೇ ಕಾರಣಕ್ಕಾಗಿ ಬ್ಯಾಂಕ್ ಗಳು ಎಟಿಎಂಗಳನ್ನು ಸ್ಥಗಿತಗೊಳಿಸುತ್ತಿವೆ. ಆ ಮೂಲಕ ಎಟಿಎಂಗಳ ನಿರ್ವಹಣೆ ವೆಚ್ಚವನ್ನು ತಗ್ಗಿಸುವುದು ಅವುಗಳ ಗುರಿಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ಡಿಸೆಂಬರ್ ನಲ್ಲಿ ದೇಶಾದ್ಯಂತ 2,163 ಕೋಟಿ ವಹಿವಾಟುಗಳು ಯುಪಿಐ ಮೂಲಕವೇ ನಡೆದಿದೆ. ಯುಪಿಐ ಮೂಲಕ ನಡೆದ ವಹಿವಾಟಿನ ಮೊತ್ತವೇ 27.97 ಲಕ್ಷ ಕೋಟಿ ರೂಪಾಯಿ ಆಗಿದೆ. ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಯುಪಿಐ ಮೂಲಕ ಪೇಮೆಂಟ್ ಮಾಡುವ ಪ್ರಮಾಣವು ಶೇ.29ರಷ್ಟು ಜಾಸ್ತಿಯಾಗಿದೆ. ಇದು ದೇಶದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೇಗೆ ಹೆಚ್ಚಾಗುತ್ತಿದೆ, ಜನರು ಹೇಗೆ ಕ್ಯಾಶ್ ಲೆಸ್ ವಹಿವಾಟಿಗೆ ಒಗ್ಗಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ : ಐಪಿಎಲ್ 2026 | ಗುಜರಾತ್ ಟೈಟಾನ್ಸ್ ತಂಡಕ್ಕೆ ಆಘಾತ.. ಸ್ಟಾರ್ ಬ್ಯಾಟರ್ ಸಾಯಿ ಸುದರ್ಶನ್ ಇಂಜುರಿ!



















