ಉಡುಪಿ : ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತಿನ ಆನಂದ ತಾಲೂಕಿನ ಕೈಲಾಸ್ ನಗರಿಯ ಭರತ್ ಕುಮಾರ್ ಎಂಬುವವರ ಪುತ್ರ ಹೀರೇಂದ್ರ ಕುಮಾರ್ (34) ಬಂಧಿತ ಆರೋಪಿ. ಕಳೆದ ನ.21ರಂದು ಇದೇ ಪ್ರಕರಣದಲ್ಲಿ ಆರೋಪಿಗಳಾದ ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಿದ್ದರು.
ರೋಹಿತ್ ಮತ್ತು ಸಂತ್ರಿ ಮಲ್ಪೆಯ ಶಿಪ್‌ಯಾರ್ಡ್‌ನ ಸಹಗುತ್ತಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನಕ್ಕೆ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣದ ತನಿಖೆ ಮಂದುವರಿಸಿದ ತನಿಖಾಧಿಕಾರಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ನೇತೃತ್ವದ ತಂಡ ಆರೋಪಿಗಳಿಗೆ ಮೊಬೈಲ್ ಸಿಮ್ ಒದಗಿಸಿದ ಆಧಾರದ ಮೇಲೆ ಹೀರೇಂದ್ರ ಕುಮಾರ್‌ನನ್ನು ಡಿ.21ರಂದು ಬಂಧಿಸಿದೆ. ಈತ ಹಣಕ್ಕಾಗಿ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ತೆಗೆದು ಆರೋಪಿಗೆ ನೀಡಿದ್ದನು. ಈ ಸಿಮ್ ಮೂಲಕ ವಾಟ್ಸಾಪ್ ಆಕ್ಟಿವ್ ಮಾಡಲು ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ಓಟಿಪಿ ಶೇರ್ ಮಾಡಿರುವುದು ಕೂಡ ಈತನೇ. ಈತ ಈಗಾಗಲೇ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡಿದ್ದಾನೆ. ಸದ್ಯ ಬಂಧಿತ ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿರುವುದು ದೃಢ: ಎಸ್ಪಿ ಹರಿರಾಂ ಶಂಕರ್
ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ
ಈ ಪ್ರಕರಣದ ಆರಂಭದಲ್ಲಿ ಆರೋಪಿಗಳು ಶಿಪ್ ಮತ್ತು ಇತರ ಮಾಹಿತಿಗಳನ್ನು ಹಣಕ್ಕಾಗಿ ಪಾಕಿಸ್ತಾನಕ್ಕೆ ಶೇರ್ ಮಾಡಿರಬಹುದೇ ಎಂಬುವುದರ ಬಗ್ಗೆ ಸಂಶಯ ಇತ್ತು. ಈ ಕುರಿತು ತೀವ್ರ ತನಿಖೆ ನಡೆಸಿದಾಗ ಆರೋಪಿಗಳು ಶೇರ್ ಮಾಡಿರುವ ಮಾಹಿತಿಗಳು ಪಾಕಿಸ್ತಾನ ದೇಶಕ್ಕೆ ರವಾನೆ ಆಗಿರುವುದು ದೃಢಪಟ್ಟಿದೆ. ತನಿಖೆಯಲ್ಲಿ ದೊರೆತ ತಾಂತ್ರಿಕ ಸಾಕ್ಷ್ಯಗಳಿಂದ ಅದು ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಪ್ರಕರಣ ಭಾರತದ ಆಂತರಿಕ ಭದ್ರತೆಗೆ ಸಂಬಂಧಪಟ್ಟಿರುವುದರಿಂದ ಬಂಧಿತ ಎಲ್ಲ ಆರೋಪಿಗಳ ವಿರುದ್ಧ ಯುಎಪಿಎ ಕಾಯಿದೆಯಡಿ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ.
ಈ ಕುರಿತಂತೆ ಮಾತನಾಡಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ಹರಿರಾಂ ಶಂಕರ್ ‘ನಿಮ್ಮ ಪರಿಸರದಲ್ಲಿ ಈ ರೀತಿ ಸಂಯಾಶಾಸ್ಪದ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿರುವ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬೀಚ್, ಬಂದರು, ಹೋಮ್ ಸ್ಟೇ, ರೆಸಾರ್ಟ್‌ಗಳಲ್ಲಿ ವಿದೇಶಿಗಳು ಬಂದರೆ, ಕೆಲಸ ಕೇಳಿಬಂದರೆ ಕೂಡಲೇ ಮಾಹಿತಿ ನೀಡಬೇಕು’ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ದೇಶ ದ್ರೋಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು,ಭದ್ರತಾ ಪಡೆಗಳಿಗೆ,ಪೋಲಿಸರಿಗೆ ಇದೊಂದು ಸವಾಲಾಗಿ ಪರಿಣಮಿಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ



















