ಮುಂಬೈ: “ನಾವೆಲ್ಲರೂ ಒಗ್ಗಟ್ಟಿನಿಂದ ಶಾಂತಿಯ ಹಾದಿಯಲ್ಲಿ ನಡೆದರೆ, ಭಾರತವನ್ನು ಅಲುಗಾಡಿಸಲು, ಸೋಲಿಸಲು ಅಥವಾ ನಮ್ಮ ಮನೋಬಲವನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ,” ಎಂದು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಹೇಳಿದ್ದಾರೆ. ಮುಂಬೈನಲ್ಲಿ ಶನಿವಾರ ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2025’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೇಟ್‌ವೇ ಆಫ್ ಇಂಡಿಯಾದಲ್ಲಿ ನಡೆದ ಈ ಸಮಾರಂಭದಲ್ಲಿ ಶಾರುಖ್ ಖಾನ್ ಅವರು 26/11 ಮುಂಬೈ ಭಯೋತ್ಪಾದಕ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸ್ಫೋಟದ ಸಂತ್ರಸ್ತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
“26/11 ಮುಂಬೈ ದಾಳಿ, ಪಹಲ್ಗಾಮ್ ದಾಳಿ ಮತ್ತು ಇತ್ತೀಚಿನ ದೆಹಲಿ ಸ್ಫೋಟಗಳಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರಿಗೆ ನನ್ನ ನಮನಗಳು. ಹಾಗೆಯೇ, ಈ ದಾಳಿಗಳಲ್ಲಿ ಹುತಾತ್ಮರಾದ ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿಗೆ ನನ್ನ ಗೌರವಪೂರ್ವಕ ವಂದನೆಗಳು,” ಎಂದು ಶಾರುಖ್ ಹೇಳಿದರು. ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 15 ಜನರು ಸಾವನ್ನಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.
ಸೈನಿಕರ ತ್ಯಾಗಕ್ಕೆ ಗೌರವ
ಕಾರ್ಯಕ್ರಮದಲ್ಲಿ ದೇಶದ ಯೋಧರನ್ನು ಉದ್ದೇಶಿಸಿ ಮಾತನಾಡಿದ ಶಾರುಖ್, ನಾಲ್ಕು ಸುಂದರ ಸಾಲುಗಳನ್ನು ವಾಚಿಸಿದರು: “ನೀವು ಏನು ಮಾಡುತ್ತೀರಿ ಎಂದು ಯಾರಾದರೂ ಕೇಳಿದರೆ, ನಾನು ದೇಶವನ್ನು ರಕ್ಷಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿ. ನೀವು ಎಷ್ಟು ಸಂಪಾದಿಸುತ್ತೀರಿ ಎಂದು ಕೇಳಿದರೆ, ನಾನು 140 ಕೋಟಿ ಜನರ ಆಶೀರ್ವಾದವನ್ನು ಸಂಪಾದಿಸುತ್ತೇನೆ ಎಂದು ಮುಗುಳ್ನಕ್ಕು ಹೇಳಿ. ನಿಮಗೆ ಭಯವಾಗುವುದಿಲ್ಲವೇ ಎಂದು ಕೇಳಿದರೆ, ನಮ್ಮ ಮೇಲೆ ದಾಳಿ ಮಾಡುವವರಿಗೆ ಆ ಭಯವಿರುತ್ತದೆ ಎಂದು ಅವರ ಕಣ್ಣಲ್ಲಿ ಕಣ್ಣಿಟ್ಟು ಹೇಳಿ.”
ನಮ್ಮ ವೀರ ಯೋಧರ ತ್ಯಾಗ ವ್ಯರ್ಥವಾಗದಂತೆ ನೋಡಿಕೊಳ್ಳಲು ನಾವೆಲ್ಲರೂ ಜಾತಿ, ಮತ, ತಾರತಮ್ಯಗಳನ್ನು ಮರೆತು ಮಾನವೀಯತೆಯ ಹಾದಿಯಲ್ಲಿ ನಡೆಯಬೇಕು ಎಂದು ಅವರು ಕರೆ ನೀಡಿದರು.
ದಿವ್ಯಾಜ್ ಫೌಂಡೇಶನ್ ಮತ್ತು ಅಮೃತಾ ಫಡ್ನವಿಸ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಂತ್ರಸ್ತರ ಕುಟುಂಬಗಳು, ದಾಳಿಗಳಲ್ಲಿ ಬದುಕುಳಿದವರು, ರಾಷ್ಟ್ರೀಯ ನಾಯಕರು ಮತ್ತು ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೀತಾ ಅಂಬಾನಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ನಟ ಟೈಗರ್ ಶ್ರಾಫ್, ಮನಿಷಾ ಕೊಯಿರಾಲಾ, ವಿಕ್ರಾಂತ್ ಮೆಸ್ಸಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಚಂಡೀಗಢ ಕಸಿಯುವ ಹುನ್ನಾರ | ಕೇಂದ್ರದ ವಿರುದ್ಧ ಪಂಜಾಬ್ ಸಿಎಂ ಆಕ್ರೋಶ ; ಭುಗಿಲೆದ್ದ ರಾಜಕೀಯ ಸಂಘರ್ಷ



















