ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ತಾವೇ ಕಾರಣ ಎಂಬ ತಮ್ಮ ರಾಗವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರಿಸಿದ್ದಾರೆ. ನನ್ನಿಂದಾಗಿಯೇ ಯುದ್ಧ ನಿಂತಿತು ಎಂದು ಮತ್ತೊಮ್ಮೆ ಪುನರುಚ್ಚರಿಸಿರುವ ಅವರು, ಈ ಬಾರಿ ಈ ಸಂಘರ್ಷದ ವೇಳೆ ಹೊಡೆದುರುಳಿಸಲಾದ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಿ ಹೊಸ ಕಥೆ ಹೇಳಿದ್ದಾರೆ. ಈ ಹಿಂದೆ ಏಳು ವಿಮಾನಗಳು ಎಂದು ಹೇಳಿದ್ದ ಅವರು, ಈಗ “ಸುಮಾರು ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು” ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.
ಇದರ ಜೊತೆಗೆ, ತಾವು ಅಧಿಕಾರಕ್ಕೆ ಬಂದ ನಂತರ ಕೊಸೊವೊ-ಸರ್ಬಿಯಾ ಮತ್ತು ಕಾಂಗೋ-ರುವಾಂಡಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಎಂಟು ಸಂಘರ್ಷಗಳನ್ನು ಬಗೆಹರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಟ್ರಂಪ್ ಹೇಳಿದ್ದೇನು?
“ನಾನು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿದ್ದೆ. ಆಗ ಅವೆರಡೂ ದೇಶಗಳು ಯುದ್ಧಕ್ಕೆ ಸಿದ್ಧವಾಗುತ್ತಿವೆ ಎಂದು ಪತ್ರಿಕೆಗಳಲ್ಲಿ ಓದಿದೆ. ಏಳು-ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಆಗ ನಾನು, ‘ನೀವು ಪರಸ್ಪರ ಯುದ್ಧ ಮಾಡುತ್ತಿದ್ದರೆ ನಾನು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ,” ಎಂದು ಟ್ರಂಪ್ ವಿವರಿಸಿದ್ದಾರೆ.
ನಾನು ಹಾಕಿದ ಬೆದರಿಕೆಗೆ ಎರಡೂ ದೇಶಗಳು ಮೊದಲು ಒಪ್ಪಲಿಲ್ಲ ಎಂದು ಹೇಳಿದ ಟ್ರಂಪ್, “‘ಇದಕ್ಕೂ ವ್ಯಾಪಾರಕ್ಕೂ ಏನು ಸಂಬಂಧ’ ಎಂದು ಅವರು ಕೇಳಿದರು. ಅದಕ್ಕೆ ನಾನು, ‘ಎಲ್ಲಾ ಸಂಬಂಧವೂ ಇದೆ. ನೀವಿಬ್ಬರೂ ಪರಮಾಣು ಶಕ್ತಿಗಳು. ನೀವು ಯುದ್ಧ ನಿಲ್ಲಿಸದಿದ್ದರೆ ವ್ಯಾಪಾರ ಇಲ್ಲ’ ಎಂದು ಖಡಾಖಂಡಿತವಾಗಿ ಹೇಳಿದೆ,” ಎಂದಿದ್ದಾರೆ.
“ನನ್ನ ಎಚ್ಚರಿಕೆಯ ಮರುದಿನವೇ ನನಗೆ ಕರೆ ಬಂತು. ಎರಡೂ ದೇಶಗಳು ಶಾಂತಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಲಾಯಿತು. ಆಗ ನಾನು, ‘ಧನ್ಯವಾದಗಳು, ಈಗ ವ್ಯಾಪಾರ ಮುಂದುವರಿಸೋಣ’ ಎಂದೆ. ಇದು ಸುಂಕದಿಂದ (tariffs) ಮಾತ್ರ ಸಾಧ್ಯವಾಯಿತು,” ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದಾರೆ.
ಭಾರತದ ತಿರಸ್ಕಾರ
ಆದಾಗ್ಯೂ, ಭಾರತವು ಟ್ರಂಪ್ ಅವರ ಈ ಹೇಳಿಕೆಗಳನ್ನು ಪದೇಪದೇ ತಿರಸ್ಕರಿಸುತ್ತಲೇ ಬಂದಿದೆ. ಭಾರತದ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಪಾಕಿಸ್ತಾನಿ ಕಮಾಂಡರ್‌ಗಳು ದುಂಬಾಲು ಬಿದ್ದ ಹಿನ್ನೆಲೆಯಲ್ಲಿ, ಮೇ 10ರಂದು ಕದನ ವಿರಾಮವನ್ನು ಘೋಷಿಸಲಾಯಿತು ಎಂದು ಭಾರತ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯಲ್ಲಿ ಅಮೆರಿಕ ಸೇರಿದಂತೆ ಯಾವುದೇ ಮೂರನೇ ದೇಶದ ಪಾತ್ರವಿರಲಿಲ್ಲ ಎಂದು ಭಾರತ ಸರ್ಕಾರ ಖಚಿತಪಡಿಸಿದೆ.
ಇದನ್ನೂ ಓದಿ: ಖ್ಯಾತ ಟ್ರಾವೆಲ್ ವ್ಲಾಗರ್ ಅನುನಯ್ ಸೂದ್ ನಿಧನ: 32ನೇ ವಯಸ್ಸಿಗೆ ಬದುಕು ಮುಗಿಸಿದ ಫೋರ್ಬ್ಸ್ ಡಿಜಿಟಲ್ ಸ್ಟಾರ್



















