ಬೆಂಗಳೂರು : ಉಸಿರಾಟದ ಸಮಸ್ಯೆಯಿಂದ ಮಂಗಳವಾರ ರಾತ್ರಿ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಶಸ್ತ್ರಚಿಕಿತ್ಸೆ ಮೂಲಕ ಪೇಸ್‌ಮೇಕರ್‌ನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದೀಗ ಅವರ ಆರೋಗ್ಯ ಸ್ಥಿರವಾಗಿದ್ದು, ಗುರುವಾರ ತಡರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಸದಾಶಿವನಗರದಲ್ಲಿರೋ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ರಾಂತಿ ಪಡೆಯುತ್ತಿದ್ದು, ಪಕ್ಷದ ಅನೇಕ ನಾಯಕರು ಮನೆಗೆ ಭೇಟಿ ನೀಡಿ ಖರ್ಗೆ ಆರೋಗ್ಯ ವಿಚಾರಿಸುತ್ತಿದ್ದಾರೆ. ಇದೀಗ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಸುರ್ಜೇವಾಲಾ ಜೊತೆಗೆ ಪ್ರಭಾರ ಉಸ್ತುವಾರಿ ಅಭಿಷೇಕ್ ದತ್ತ ಕೂಡ ಖರ್ಗೆ ಮನೆಗೆ ಆಗಮಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ತಿಳಿದ ನಂತರ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ್ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ, ನಿನ್ನೆ ಪ್ರಧಾನಿ ಮೋದಿ ಅವರು ನಿನ್ನೆ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿ, ಧೀರ್ಘಾಯುಷ್ಯಕ್ಕೆ ಹಾರೈಸಿದ್ದರು.



















