ನವದೆಹಲಿ: ಬಿಜೆಪಿಯ ವೈಚಾರಿಕ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸ್ಸೆಸ್) ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರು “ಭಾರತದ ತಾಲಿಬಾನ್” ಎಂದು ಕರೆದಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷವು ರಾಷ್ಟ್ರೀಯವಾದಿ ಸಂಘಟನೆಗಳನ್ನು ನಿಂದಿಸುತ್ತದೆ ಮತ್ತು ಪಿಎಫ್ಐ, ಸಿಮಿಯಂತಹ ನಿಷೇಧಿತ ತೀವ್ರಗಾಮಿ ಸಂಘಟನೆಗಳನ್ನು ಪ್ರೀತಿಸುತ್ತದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಕರ್ನಾಟಕ ವಿಧಾನ ಪರಿಷತ್ ಸದಸ್ಯರೂ ಆಗಿರುವ ಮಾಜಿ ಸಂಸದ ಬಿಕೆ ಹರಿಪ್ರಸಾದ್, ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಆರೆಸ್ಸೆಸ್ಸ್ ಅನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದರು. “ಅವರು (ಆರೆಸ್ಸೆಸ್) ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ನಾನು ಆರೆಸ್ಸೆಸ್ ಅನ್ನು ತಾಲಿಬಾನ್ಗೆ ಮಾತ್ರ ಹೋಲಿಸುತ್ತೇನೆ. ಅದು ಭಾರತದ ತಾಲಿಬಾನ್. ಅದನ್ನು ಪ್ರಧಾನಿಯವರು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ” ಎಂದು ಅವರು ಹೇಳಿದ್ದರು.
“ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವೊಬ್ಬ ‘ಸಂಘಿ’ಯಾದರೂ ಭಾಗವಹಿಸಿದ್ದಾರೆಯೇ? ಆರೆಸ್ಸೆಸ್ ನೋಂದಾಯಿತ ಸಂಸ್ಥೆಯಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ಅವರಿಗೆ ಎಲ್ಲಿಂದ ಹಣ ಬರುತ್ತದೆ ಎಂದು ನಮಗೆ ತಿಳಿದಿಲ್ಲ. ಸಂವಿಧಾನದ ಪ್ರಕಾರ, ದೇಶದಲ್ಲಿ ಕೆಲಸ ಮಾಡಲು ಬಯಸುವ ಯಾವುದೇ ಎನ್‌ಜಿಒ ನೋಂದಾಯಿಸಿಕೊಳ್ಳಬೇಕು,” ಎಂದೂ ಹರಿಪ್ರಸಾದ್ ಹೇಳಿದ್ದರು.
ಬಿಜೆಪಿ ಮತ್ತು ಆರೆಸ್ಸೆಸ್ “ಇತಿಹಾಸವನ್ನು ತಿರುಚುವುದರಲ್ಲಿ ನಿಪುಣರು” ಎಂದೂ ಆರೋಪಿಸಿದ್ದ ಅವರು, “ಅವರು ಇತಿಹಾಸವನ್ನು ಪುನಃ ಬರೆಯಲು ಪ್ರಯತ್ನಿಸುತ್ತಿದ್ದಾರೆ. ಎರಡೂ ಧರ್ಮಗಳಿಗೆ ಪ್ರತ್ಯೇಕ ರಾಜ್ಯ ಬೇಕು ಎಂಬುದು ಮುಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಅವರ ಅಭಿಪ್ರಾಯವಾಗಿತ್ತು. ಈಗ ಅವರು ಅದಕ್ಕೆಲ್ಲಾ ಕಾಂಗ್ರೆಸ್ ಮೇಲೆ ದೂಷಣೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹರಿಪ್ರಸಾದ್ ಆರೋಪಿಸಿದ್ದರು.
ಬಿಜೆಪಿಯ ತೀಕ್ಷ್ಣ ಪ್ರತಿಕ್ರಿಯೆ
ಹರಿಪ್ರಸಾದ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, “ಕಾಂಗ್ರೆಸ್ ಭಾರತೀಯ ಸೇನೆಗಳಲ್ಲಿ ಗೂಂಡಾಗಳನ್ನು, ಆಪರೇಷನ್ ಸಿಂದೂರದಲ್ಲಿ ಶರಣಾಗತಿಯನ್ನು ಮತ್ತು ಆರೆಸ್ಸೆಸ್‌ನಲ್ಲಿ ತಾಲಿಬಾನ್ ಅನ್ನು ಕಾಣುತ್ತದೆ ಮತ್ತು ಪಾಕಿಸ್ತಾನವನ್ನು ತನ್ನದೆಂದು ಪರಿಗಣಿಸುತ್ತದೆ,” ಎಂದಿದ್ದಾರೆ. “ಸೇನೆ, ಸಾಂವಿಧಾನಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಮತ್ತು ಸನಾತನ ಧರ್ಮವನ್ನು ಅವಮಾನಿಸುವುದು ಕಾಂಗ್ರೆಸ್‌ನ ಚಾಳಿಯಾಗಿದೆ. ರಾಷ್ಟ್ರೀಯವಾದಿ ಸಂಘಟನೆಗಳನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ನ್ಯಾಯಾಲಯಗಳು ಹಲವು ಬಾರಿ ಆ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿವೆ. ಆದರೂ ಅವರಿಗೆ ಬುದ್ಧಿ ಬಂದಿಲ್ಲ,” ಎಂದಿದ್ದಾರೆ.
“ಕಾಂಗ್ರೆಸ್ನ ಮನಸ್ಥಿತಿಯೇ ತಾಲಿಬಾನ್ ಮನಸ್ಥಿತಿ. ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರು ಆರೆಸ್ಸೆಸ್ ಅನ್ನು ಏಕೆ ಹೊಗಳಿದ್ದರು? ಮಾಜಿ ರಾಷ್ಟ್ರಪತಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಪ್ರಣಬ್ ಮುಖರ್ಜಿ ಅವರು ಆರೆಸ್ಸೆಸ್ ಪ್ರಧಾನ ಕಚೇರಿಗೆ ಏಕೆ ಭೇಟಿ ನೀಡಿದ್ದರು?” ಎಂದೂ ಪೂನಾವಾಲಾ ಪ್ರಶ್ನಿಸಿದ್ದಾರೆ.


















