ಬೆಂಗಳೂರು: ಕೇಂದ್ರ ಸರ್ಕಾರವು 8ನೇ ವೇತನ ಆಯೊಗದ ರಚನೆಗೆ ಅನುಮತಿ ನೀಡಿದೆ. ಶೀಘ್ರದಲ್ಲೇ ವೇತನ ಆಯೋಗವನ್ನು ರಚಿಸಲಾಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಇದರ ಮಧ್ಯೆಯೇ, ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಶಿಫಾರಸುಗಳಂತೆ ಎಷ್ಟು ಸಂಬಳ ಸಿಗುತ್ತದೆ ಎಂಬ ಕುರಿತು ಚರ್ಚೆಗಳು ಆರಂಭವಾಗಿವೆ. ಹೊಸ ವರದಿಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಸಂಬಳದ ಶೇ.30-34ರಷ್ಟು ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
2016ರಲ್ಲಿ 7ನೇ ವೇತನ ಆಯೋಗವು ನೌಕರರಿಗೆ 2.57 ಫಿಟ್ ಮೆಂಟ್ ನಿಗದಿಪಡಿಸಿತ್ತು. ಆದರೆ, 8ನೇ ವೇತನ ಆಯೋಗವು 1.82 ರಿಂದ 2.46ವರೆಗೆ ಫಿಟ್ ಮೆಂಟ್ ಗೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಬೇಸಿಕ್ ಸಂಬಳ ಸೇರಿ ಇಡೀ ಸ್ಯಾಲರಿಯು ಫಿಟ್ ಮೆಂಟ್ ಲೆಕ್ಕಾಚಾರದಲ್ಲೇ ಹೆಚ್ಚಾಗುವ ಕಾರಣ ಆಯೋಗವು ಎಷ್ಟು ಶಿಫಾರಸು ಮಾಡಲಿದೆ ಎಂಬ ಕುತೂಹಲ ಮೂಡಿದೆ.
8ನೇ ವೇತನ ಆಯೋಗ ಜಾರಿಯಾದರೆ 1.12 ಕೋಟಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಕೇಂದ್ರ ಸರಕಾರಿ ನೌಕರರ ಬೇಸಿಕ್ ಸಂಬಳ ಈಗ 50 ಸಾವಿರ ರೂ. ಇದೆ ಎಂದಿಟ್ಟುಕೊಳ್ಳಿ. ಇದಕ್ಕೆ 1.82 ಫಿಟ್ ಮೆಂಟ್ ಅನ್ವಯವಾದರೆ, ಅವರ ಬೇಸಿಕ್ ಸ್ಯಾಲರಿ 91 ಸಾವಿರ ರೂ. ಆಗುತ್ತದೆ. ಎಚ್ ಆರ್ ಎ 21,840 ರೂ., ಟಿಎ 2,457 ರೂ. ಸೇರಿ ಅವರ ಒಟ್ಟು ಸಂಬಳವು ಮಾಸಿಕ 1,15,297 ರೂ.ಗೆ ಏರಿಕೆಯಾಗುತ್ತದೆ.
ಅಲ್ಲದೆ, 2.15 ಫಿಟ್ಮೆಂಟ್ ಅನ್ವಯವಾದರೆ ಅವರ ಬೇಸಿಕ್ ಸಂಬಳ ದ್ವಿಗುಣವಾಗುತ್ತದೆ. ಈ ಫಿಟ್ಮೆಂಟ್ ಅನ್ವಯ 50 ಸಾವಿರ ರೂ. ಬೇಸಿಕ್ ಸಂಬಳವೇ 1,07,500 ರೂ.ಗೆ ಏರಿಕೆಯಾಗುತ್ತದೆ. ಇನ್ನು, 25,800 ರೂ. ಎಚ್ ಆರ್ ಎ ಹಾಗೂ 2,903 ರೂ. ಟಿಎ ಸೇರಿ ಒಟ್ಟು 1,36,203 ರೂ. ಸಂಬಳ ದೊರೆಯುತ್ತದೆ. ಇನ್ನು ಕೇಂದ್ರ ನೌಕರರಿಗೆ 2.46 ಫಿಟ್ ಮೆಂಟ್ ದೊರೆತರೆ, 50 ಸಾವಿರ ರೂ. ಬೇಸಿಕ್ ಸ್ಯಾಲರಿಯು 1,23,200 ರೂ. ಆಗುತ್ತದೆ. 24,640 ರೂ. ಎಚ್ ಆರ್ ಎ ಹಾಗೂ 3,326 ರೂ. ಟಿಎ ಸೇರಿ ಒಟ್ಟು 1,51,166 ರೂ. ಸಂಬಳ ಲಭಿಸುತ್ತದೆ. ಇದು ನೌಕರರಿಗೆ ಬಂಪರ್ ಸ್ಯಾಲರಿ ಹೆಚ್ಚಳ ಎಂದೇ ಹೇಳಲಾಗುತ್ತಿದೆ.


















