ನವದೆಹಲಿ: ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದ್ದು, ಶನಿವಾರ 2,710ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಮೇ 25ಕ್ಕೆ ಅಂತ್ಯಗೊಂಡ ವಾರದಲ್ಲಿ 1,000ದ ಗಡಿ ದಾಟಿದ್ದ, ಸೋಂಕಿತರ ಸಂಖ್ಯೆ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಇನ್ನು, ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ಕೇರಳ ಪಾತ್ರವಾಗಿದೆ.
ರಾಜ್ಯವಾರು ಪರಿಸ್ಥಿತಿ (ಮೇ 30, 2025ರ ದತ್ತಾಂಶದಂತೆ):
- ಕೇರಳ: 1,147 ಸಕ್ರಿಯ ಪ್ರಕರಣಗಳು (ಈ ವಾರ 335 ಹೊಸ ಪ್ರಕರಣಗಳು)
- ಮಹಾರಾಷ್ಟ್ರ: 424 ಸಕ್ರಿಯ ಪ್ರಕರಣಗಳು (ಈ ವಾರ 154 ಹೊಸ ಪ್ರಕರಣಗಳು)
- ದಿಲ್ಲಿ: 294 ಸಕ್ರಿಯ ಪ್ರಕರಣಗಳು (ಈ ವಾರ 99 ಹೊಸ ಪ್ರಕರಣಗಳು)
- ಗುಜರಾತ್: 223 ಸಕ್ರಿಯ ಪ್ರಕರಣಗಳು
- ಕರ್ನಾಟಕ ಮತ್ತು ತಮಿಳುನಾಡು: ತಲಾ 148 ಸಕ್ರಿಯ ಪ್ರಕರಣಗಳು
- ಪಶ್ಚಿಮ ಬಂಗಾಳ: 116 ಸಕ್ರಿಯ ಪ್ರಕರಣಗಳು
- ಮಿಜೋರಾಮ್: 7 ತಿಂಗಳ ನಂತರ 2 ಹೊಸ ಪ್ರಕರಣಗಳು ವರದಿಯಾಗಿವೆ.
ಸಾವುಗಳ ವಿವರ:
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಒಟ್ಟು 7 ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಇದರೊಂದಿಗೆ, 2025ರ ಮೊದಲ ಐದು ತಿಂಗಳಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ ಒಟ್ಟು 22ಕ್ಕೇರಿದಂತಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಚ್ರದಲ್ಲಿ ಇಬ್ಬರು, ದಿಲ್ಲಿ, ಗುಜರಾತ್, ಕರ್ನಾಟಕ, ಪಂಜಾಬ್, ತಮಿಳುನಾಡಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಆದರೂ, ಬಹುತೇಕ ಕೋವಿಡ್ ಪ್ರಕರಣಗಳು ಸೌಮ್ಯವಾಗಿದ್ದು, ಸದ್ಯಕ್ಕೆ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಕೇರಳದಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಅಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರಬಹುದು ಎಂದೂ ಕೇಂದ್ರ ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
ಹೊಸ ಒಮಿಕ್ರಾನ್ ಉಪತಳಿಗಳು ಕಾರಣ:
ಇತ್ತೀಚಿನ ದಿನಗಳಲ್ಲಿ ಸೋಂಕು ಪ್ರಕರಣಗಳ ಏರಿಕೆಗೆ ಎರಡು ಹೊಸ ಒಮಿಕ್ರಾನ್ ಉಪ ತಳಿಗಳಾದ ಎಲ್‌ಎಫ್.7 ಮತ್ತು ಎನ್‌ಬಿ.1.8.1 ಕಾರಣವೆಂದು ತಜ್ಞರು ಅಂದಾಜಿಸಿದ್ದಾರೆ. ಆದರೂ, ಭಾರತದಲ್ಲಿ ಜೆಎನ್.1 ತಳಿಯೇ ಹೆಚ್ಚು ಪ್ರಬಲವಾಗಿದ್ದು, ಪರೀಕ್ಷಿಸಿದ ಮಾದರಿಗಳಲ್ಲಿ ಶೇ.53ರಷ್ಟು ಇದೇ ಉಪತಳಿ ಕಂಡುಬಂದಿದೆ.



















