ಕನ್ನಡತಿ ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಇದೀಗ ಹೊಸ ದಾಖಲೆ ಬರೆದಿದ್ದಾರೆ. ಪ್ರಭಾಸ್ ನಟನೆಯ ಮುಂದಿನ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ಮಿಂಚಲಿದ್ದಾರೆ.

ಈ ಚಿತ್ರಕ್ಕೆ ದೀಪಿಕಾ ಬರೋಬ್ಬರಿ 20 ಕೋಟಿ ಸಂಭಾವನೆ ಪಡೆಯೋ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವೆಂಗಾರ ಸ್ಪಿರಿಟ್ ಸಿನಿಮಾಗೀಗ ದೀಪಿಕಾ ನಾಯಕಿಯಾಗ್ತಿರೋದು ಅಧಿಕೃತವಾಗಿದೆ.

ಪಠಾಣ್, ಜವಾನ್, ಫೈಟರ್ ನಂಥಾ ಸೂಪರ್ ಡ್ಯೂಪರ್ ಹಿಟ್ ನೀಡಿರುವ ದೀಪಿಕಾ ಇದೀಗ ತಮ್ಮ ಸಂಭಾವನೆಯನ್ನು 20 ಕೋಟಿಗೆ ಹೆಚ್ಚಿಸಿಕೊಂಡು ತಮ್ಮ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ. ಈ ವರ್ಷದ ಸೆಪ್ಟಂಬರ್-ಅಕ್ಟೋಬರ್ ನಲ್ಲಿ ಸ್ಪಿರಿಟ್ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, 2027ಕ್ಕೆ ತೆರೆಗೆ ಬರುವ ಯೋಜನೆ ರೂಪಿಸಿದೆ.

ಈ ಹಿಂದೆ ಚಿತ್ರವೊಂದಕ್ಕೆ 10ರಿಂದ 15 ಕೋಟಿ ಪಡೀತಿದ್ದ ದೀಪಿಕಾ ಇದೀಗ 20 ಕೋಟಿಯ ಚೆಕ್ ಗಿಟ್ಟಿಸೋ ಮೂಲಕ ಬಾಲಿವುಡ್ ನ ದುಬಾರಿ ನಟಿಯಾಗಿ ಹೊರಹೊಮ್ಮಿದ್ದಾರೆ. ಮೊನ್ನೆಯಷ್ಟೇ ಮಹೇಶ್ ಬಾಬು ಜೊತೆಗಿನ ಚಿತ್ರಕ್ಕೆ ಪ್ರಿಯಾಂಕ ಚೋಪ್ರಾ 15 ಕೋಟಿ ಹಾಗೂ ಶ್ರದ್ಧಾ ಕಪೂರ್ ಹೊಸ ಸಿನಿಮಾಗೆ 17 ಕೋಟಿ ಸಂಭಾವನೆ ಪಡೆದು ಸುದ್ದಿಯಾಗಿದ್ರು.