ಗುವಾಹಟಿ: ಅಕ್ರಮ ಸಂಬಂಧವೊಂದಕ್ಕೆ 10 ವರ್ಷದ ಮಗು ಬಲಿಯಾದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ತನ್ನ ತಾಯಿಯ ಪ್ರಿಯಕರನಿಂದಲೇ ಈ ಮಗು ಹತ್ಯೆಗೀಡಾಗಿದೆ. 10 ವರ್ಷದ ಬಾಲಕನನ್ನು ಕೊಂದ ವ್ಯಕ್ತಿಯು, ಬಾಲಕನ ಶವವನ್ನು ಸೂಟ್ಕೇಸ್ವೊಂದರೊಳಗೆ ಇಟ್ಟು ಗುವಾಹಟಿಯ ಪೊದೆಯೊಂದರಲ್ಲಿ ಬಿಸಾಕಿ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಗ ಕಾಣೆಯಾದ ಹಿನ್ನೆಲೆಯಲ್ಲಿ ಮಹಿಳೆಯು ಪೊಲೀಸ್ ಠಾಣೆಗೆ ಬಂದು ನಾಪತ್ತೆ ದೂರು ಸಲ್ಲಿಸಿದ್ದರು. ಟ್ಯೂಷನ್ಗೆಂದು ಹೋಗಿದ್ದ ಮಗ ಮನೆಗೆ ವಾಪಸ್ ಬಂದಿಲ್ಲ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ಮಹಿಳೆಯು ತನ್ನ ಗಂಡನಿಂದ ಪ್ರತ್ಯೇಕಗೊಂಡಿದ್ದು, ಆಕೆಯು ಜಿತುಮೋನಿ ಹಲೋಯಿ ಎಂಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು, ಜಿತುಮೋನಿಯನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದರು. ಕೊನೆಗೆ ಸತ್ಯ ಬಾಯಿಬಿಟ್ಟ ಆರೋಪಿ, ಮಗುವಿನ ಮೃತದೇಹವಿರುವ ಸೂಟ್ ಕೇಸ್ ಬಿಸಾಕಿದ ಸ್ಥಳವನ್ನು ತೋರಿಸಿದ್ದ. ನಗರದ ಹೊರವಲಯದ ಪೊದೆಯಲ್ಲಿ ಸಿಕ್ಕ ಸೂಟ್ ಕೇಸ್ ತೆರೆದು ನೋಡಿದಾಗ ಅದರೊಳಗೆ ಮಗುವಿನ ಶವವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಜಿತುಮೋನಿ ಹಲೋಯಿಯನ್ನು ಬಂಧಿಸಲಾಗಿದೆ. ಈ ಕೊಲೆಯಲ್ಲಿ ಮಹಿಳೆಯ ಪಾತ್ರವೂ ಇತ್ತೇ ಎಂಬ ಬಗ್ಗೆ ತನಿಖೆ ನಡೆಸಲು ಆಕೆಯನ್ನೂ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಇದೇ ವೇಳೆ, ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆಕೆಯ ಪತಿಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.