ಬೆಂಗಳೂರು, ಏ, 10; “ರಾಜಕೀಯ ಎಂಬುದು ಕೌಶಲ್ಯ. ಚೆಸ್ ಎಂಬುದು ಮೈಂಡ್ ಗೇಮ್. ರಾಜಕೀಯದಲ್ಲಿ ನಾವು ನಮ್ಮ ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ರಾಜಕೀಯ ವ್ಯವಸ್ಥೆಯಲ್ಲಿ ಎದುರಾಳಿಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಚೆಸ್ ನಮಗೆ ಕಲಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಕೋರಮಂಗಲದ ಒಳಂಗಾಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ “2ನೇ ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ – 2025” ಕ್ಕೆ ಚೆಸ್ ಆಡುವ ಮೂಲಕ ಉದ್ಘಾಟಿಸಿದ ಅವರು, ರಾಜಕೀಯ ವ್ಯವಸ್ಥೆಯಲ್ಲಿ ಹೇಗೆ ಆಟ ಆಡಬೇಕು ಎಂಬುದನ್ನು ಚೆಸ್ ಅರ್ಥಮಾಡಿಸುತ್ತದೆ. ಚೆಸ್ ನಲ್ಲಿ ರಾಜನನ್ನು ರಕ್ಷಿಸಬೇಕು. ಅದಕ್ಕಾಗಿಯೇ ರಾಜ ಸಮರ್ಥವಾಗಿ ಮೈಂಡ್ ಗೇಮ್ ಆಡಬೇಕು. ಇದೇ ರೀತಿ ರಾಜಕೀಯದಲ್ಲೂ ಎದುರಾಳಿಗಳನ್ನು ಎದುರಿಸುವುದು ಮುಖ್ಯವಾಗಿದೆ. ಚೆಸ್ ಈ ಎಲ್ಲಾ ಕೌಶಲ್ಯಗಳನ್ನು ನಮಗೆ ಕಲಿಸುತ್ತದೆ ಎಂದರು.
ಚೆಸ್ ಆಡುವ ಕುಟುಂಬ ಶಿಸ್ತಿನಿಂದ ಇರಲಿದ್ದು, ವ್ಯವಸ್ಥೆಯಲ್ಲಿ ಸದೃಢವಾಗಿ ರೂಪುಗೊಳ್ಳುತ್ತದೆ. ಚೆಸ್ ಕ್ರೀಡಾಕೂಟಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಂಡೊಯ್ಯಲು ಕಲ್ಯಾಣ ಕರ್ನಾಟಕ ಮಂಡಳಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಆಸಕ್ತಿ ತೋರಿರುವುದು ಒಳ್ಳೆಯ ಬೆಳವಣಿಗೆ. ಚೆಸ್ ಅನ್ನು ನಮ್ಮ ಜಿಲ್ಲೆಯಲ್ಲೂ ಪ್ರೋತ್ಸಾಹಿಸಲು ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತೇವೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಮಂಡಳಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಮಾತನಾಡಿ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಜನಸಂಖ್ಯೆ ರಾಜ್ಯದ ನಾಲ್ಕನೇ ಒಂದು ಭಾಗದಷ್ಟಿದೆ. ಈ ಭಾಗದಲ್ಲಿ ಚೆಸ್ ಕ್ರೀಡೆಗೆ ಆದ್ಯತೆ ನೀಡುವುದು ತಮ್ಮ ಉದ್ದೇಶವಾಗಿದೆ,”ಎಂದು ಹೇಳಿದರು.
ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸೌಮ್ಯ ಎಂ.ಯು ಮಾತನಾಡಿ, ಬೆಂಗಳೂರಿನಲ್ಲಿ ಚೆಸ್ ಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವ ಉದ್ದೇಶ ಹೊಂದಲಾಗಿದೆ. ಪಂದ್ಯಾವಳಿಯಲ್ಲಿ ಗೆದ್ದವರಿಗೆ 50 ಲಕ್ಷ ರೂ ಬಹುಮಾನ ದೊರೆಯುತ್ತಿದೆ., ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಣದೀಪ್ ಡಿ, ಅಖಿಲ ಭಾರತ ಚೆಸ್ ಫೆಡರೇಷನ್ ಉಪಾಧ್ಯಕ್ಷರಾದ ಡಾ.ಡಿ.ಪಿ. ಅನಂತ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಮಧುಕರ್ ಟಿ.ಎನ್ ಮತ್ತಿತರರು ಉಪಸ್ಥಿತರಿದ್ದರು.



















