ಬೆಂಗಳೂರು: ದಿನಗೂಲಿ ಕೆಲಸ ಮಾಡುವವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ ಐಆರ್(FIR) ದಾಖಲಾಗಿದೆ.
ಪೀಣ್ಯ ಪ್ರಥಮ ದರ್ಜೆ ಕಾಲೇಜಿನ(Peenya First Class College) ಬಳಿಯಿರುವ ಅಕ್ಕಮಹಾದೇವಿ ಸ್ಲಂನಲ್ಲಿ ವಾಸಿಸುತ್ತಿದ್ದ ದಿನಗೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಸ್ಲಂನಲ್ಲಿ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದರು. ಆದರೆ, ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿ ತಂದು ಏಕಾಏಕಿ ಎಲ್ಲರ ಮನೆ ನೆಲಸಮ ಮಾಡಿದ್ದಾರೆ. ಹೀಗಾಗಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬಂದಿವೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ವಸಂತ್ ಕುಮಾರ್(Vasant Kumar), ಚನ್ನಕೇಶವ, ನವೀನ್, ರಾಮ , ಕಿಟ್ಟಿ , ಗಂಗಾ ಎಂಬುವವರು ಬಂದು ಮನೆ ನೆಲಸಮ ಮಾಡಿಸಿದ್ದಾರೆಂದು ದೂರು ದಾಖಲಿಸಲಾಗಿದೆ. ನೆಲಸಮ ಮಾಡಿದ ವೇಳೆ ಒಂದೊಂದು ಮನೆಯಲ್ಲಿ ಕೂಡಿಟಿದ್ದ 20 ರಿಂದ 70 ಸಾವಿರ ರೂ. ಹಣ, 30 ಗ್ರಾಂ ಚಿನ್ನಾಭರಣ ಮಣ್ಣು ಪಾಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಮುನಿರತ್ನ ತಮ್ಮ ರಾಜಕೀಯ ಪ್ರಭಾವ ಬಳಸಿ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿದ್ದಾರೆಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತುತ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ (POLICE STATION) ಪ್ರಕರಣ ದಾಖಲಾಗಿದೆ.

















