ಪೂಂಚ್: ಸೇನಾ ವಾಹನ ಕಂದಕಕ್ಕೆ ಉರುಳಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿ, ಕೆಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸೇನಾ ವಾಹನವು ಆಳವಾದ ಕಂದಕಕ್ಕೆ ಉರುಳಿದ್ದರಿಂದಾಗಿ ಈ ದುರ್ಘಟನೆ ನಡೆಯುವಂತಾಗಿದೆ. ಪರಿಣಾಮ ಐವರು ಸೈನಿಕರು ಸಾವನ್ನಪ್ಪಿ, 12 ಜನ ಸೈನಿಕರು ಗಾಯಗೊಂಡಿದ್ದಾರೆ. ಈ ವಾಹನದಲ್ಲಿ 18 ಜನ ಯೋಧರು ಇದ್ದರು ಎಂದು ತಿಳಿದು ಬಂದಿದೆ.
ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಘರೋವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಈ ದುರ್ಘಟನೆ ಇಂದು ಸಂಜೆ ನಡೆದಿದೆ ಎನ್ನಲಾಗಿದೆ. ಸೇನಾ ವಾಹನವು ನಿಲಂ ಪ್ರಧಾನ ಕಚೇರಿಯಿಂದ ಎಲ್ ಒಸಿ ಮೂಲಕ ಬನೋಯ್ ಘರೋವಾ ಪೋಸ್ಟ್ ಗೆ ತೆರಳುತ್ತಿದ್ದ 11 ಮರಾಠಾ ಲೈಟ್ ಇನ್ ಫೆಂಟ್ರಿಯ ಸೇನಾ ವಾಹನ ಅಪಘಾತಕ್ಕೆ ಈಡಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಾಹನವು ಸುಮಾರು 150 ಅಡಿ ಆಳದ ಕಮರಿಗೆ ಬಿದ್ದಿದ್ದು, ಚಾಲಕ ಸೇರಿದಂತೆ 12 ಸೈನಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.