ಕೋಲ್ಕತ್ತಾ : ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್(ಟಿಎಂಸಿ)ನಲ್ಲಿ ಬಂಡಾಯದ ಬಿರುಗಾಳಿ ಎದ್ದಿರುವಂತೆಯೇ ರಾಜ್ಯಸಭಾ ಸಂಸದ ಹಾಗೂ ಪ್ರಸಿದ್ಧ ಗಾಯಕ ಬಾಬುಲ್ ಸುಪ್ರಿಯೋ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಭಾರಿ ಹಿನ್ನಡೆಯ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದಲ್ಲಿ ತೀವ್ರ ಆಂತರಿಕ ಕಲಹ ಸೃಷ್ಟಿಯಾಗಿದ್ದು, 28 ಸಂಸದರ ಪೈಕಿ ಸುಮಾರು 20 ಸಂಸದರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ ಎಂಬ ವದಂತಿಗಳ ನಡುವೆಯೇ ಸುಪ್ರಿಯೋ ಪೋಸ್ಟ್ ಅವರ ಮುಂದಿನ ನಡೆ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ.

ಚುನಾವಣಾ ಸೋಲಿನ ನಂತರ ಟಿಎಂಸಿ ಪಕ್ಷದ ಪ್ರಮುಖ ಸಂಸದರಾದ ಶತಬ್ದಿ ರಾಯ್ ಮತ್ತು ಡಾ. ಕಕೋಲಿ ಘೋಷ್ ದಸ್ತಿದಾರ್ ಸೇರಿದಂತೆ ಹಲವು ಹಿರಿಯ ನಾಯಕರು ಬಿಜೆಪಿ ನೇತೃತ್ವದ ಮೈತ್ರಿಕೂಟದತ್ತ ಮುಖ ಮಾಡಿದ್ದಾರೆ ಎಂಬ ಮುನ್ಸೂಚನೆಗಳು ಸಿಕ್ಕಿವೆ. ಈ ನಡುವೆ, ಬಾಬುಲ್ ಕೂಡ ಪಕ್ಷ ಬದಲಾಯಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿದ್ದು, ಇದಕ್ಕೆ ಸ್ವತಃ ಬಾಬುಲ್ ಸುಪ್ರಿಯೋ ಅವರೇ ಪ್ರತಿಕ್ರಿಯಿಸಿದ್ದಾರೆ. “ನಾನು ಯಾವ ಕಡೆ ಇದ್ದೇನೆ ಎಂದು ಕೇಳುವ ಮಾಧ್ಯಮಗಳ ಕರೆಗಳಿಂದ ಸುಸ್ತಾಗಿದ್ದೇನೆ. ನಾನು ಸದ್ಯ ಯಾರ ಜೊತೆ ಇದ್ದೇನೋ, ಅದೇ ಪಕ್ಷ ಮತ್ತು ನಾಯಕರೊಂದಿಗೆ ಮುಂದುವರಿಯುತ್ತಿದ್ದೇನೆ” ಎಂದು ಬರೆಯುವ ಮೂಲಕ ಸದ್ಯಕ್ಕೆ ತಾವು ಟಿಎಂಸಿಯಲ್ಲೇ ಇರುವುದಾಗಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ಅವರ ಪತ್ರದ ಒಳಗಿನ ಸಾಲುಗಳು ಬೇರೆಯದೇ ಕಥೆ ಹೇಳುತ್ತಿವೆ.
ಹೊಸ ಮುಖ್ಯಮಂತ್ರಿಗೆ ಬೆಂಬಲ, ಬಿಜೆಪಿ ಬಗ್ಗೆ ಒಲವು
ತಮ್ಮ ಪೋಸ್ಟ್‌ನಲ್ಲಿ ಸುಪ್ರಿಯೋ ಅವರು ಬಿಜೆಪಿಯ ಭರ್ಜರಿ ಜನಾದೇಶವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಅವರ ನಿಷ್ಠಾವಂತರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಬೆನ್ನಲ್ಲೇ, ಸುಪ್ರಿಯೋ ಅವರ ಈ ನಡೆ ಪಕ್ಷದ ನಿಲುವಿಗೆ ವಿರುದ್ಧವಾಗಿ ಕಂಡುಬಂದಿದೆ. ಅಷ್ಟೇ ಅಲ್ಲದೆ, “ನಾನು ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಮುನ್ನಡೆಯಲಿದ್ದೇನೆ ಮತ್ತು ನನ್ನ ಸಂಸದರ ನಿಧಿಯನ್ನು (MPLAD) ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಿದ್ದೇನೆ” ಎಂದು ಹೇಳಿರುವುದು ಅವರು ತಮ್ಮ ಹಳೆಯ ಪಕ್ಷವಾದ ಬಿಜೆಪಿಯೊಂದಿಗೆ ಮತ್ತೆ ಸಖ್ಯ ಬೆಳೆಸಲು ಸೇತುವೆ ನಿರ್ಮಿಸುತ್ತಿದ್ದಾರೆ ಎಂಬ ಮುನ್ಸೂಚನೆಯನ್ನು ನೀಡಿದೆ.
ಸ್ವಪಕ್ಷೀಯರ ವಿರುದ್ಧವೇ ಆಕ್ರೋಶ
ತಮ್ಮದೇ ಪಕ್ಷದೊಳಗಿನ ವಿರೋಧಿಗಳ ವಿರುದ್ಧ ಹರಿಹಾಯ್ದಿರುವ ಸುಪ್ರಿಯೋ, ಈ ಹಿಂದೆ ತಾವೊಬ್ಬ ಕೇಂದ್ರ ಸಚಿವರಾಗಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಾರ್ವಜನಿಕವಾಗಿ ಲಘು ಉಪಹಾರ ಸೇವಿಸಿದ್ದ ಘಟನೆಯನ್ನು ನೆನಪಿಸಿಕೊಂಡು, ಅಂದು ಸ್ವಪಕ್ಷದವರೇ ತಮ್ಮ ವಿರುದ್ಧ ಕ್ರೂರವಾಗಿ ನಡೆದುಕೊಂಡಿದ್ದರು ಎಂದು ಬೇಸರ ಹೊರಹಾಕಿದ್ದಾರೆ. ಇದೇ ವೇಳೆ, ಚುನಾವಣೆ ಮುಗಿದ ತಕ್ಷಣ ಕೇಸರಿ ಪಾಳಯದತ್ತ ಓಡುತ್ತಿರುವ ಸಹೋದ್ಯೋಗಿ ಸಂಸದರನ್ನು ವ್ಯಂಗ್ಯವಾಡಿರುವ ಅವರು, “ಚುನಾವಣಾ ಫಲಿತಾಂಶ ಬಂದ ತಕ್ಷಣ ಎಲ್ಲರಿಗೂ ದಿಢೀರನೆ ಜ್ಞಾನೋದಯವಾಗಿ ಕೇಸರಿ ನೆರಳಿನತ್ತ ಧಾವಿಸುತ್ತಿರುವುದು ನೋಡಿದರೆ ಹಾಸ್ಯಾಸ್ಪದವೆನಿಸುತ್ತದೆ” ಎಂದಿದ್ದಾರೆ. ಇದೇ ವೇಳೆ ಮಮತಾ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸಾರ್ವಜನಿಕ ಹಣ ಲೂಟಿ ಮಾಡಿದವರು ಜೈಲು ಸೇರಲೇಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯಕ್ಕಿಲ್ಲ ದೆಹಲಿ ಯಾನ
ಸಾಮಾನ್ಯವಾಗಿ ಪಕ್ಷಾಂತರ ಮಾಡುವ ನಾಯಕರು ದೆಹಲಿಗೆ ಭೇಟಿ ನೀಡುವುದು ವಾಡಿಕೆ. ಆದರೆ ಸುಪ್ರಿಯೋ ಅವರು ಸದ್ಯಕ್ಕೆ ತಾವು ದೆಹಲಿಗೆ ಹೋಗುತ್ತಿಲ್ಲ ಮತ್ತು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದವರೆಗೂ ಬಂಗಾಳದಲ್ಲೇ ಇರಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಟಿಎಂಸಿಯಲ್ಲೇ ಉಳಿದುಕೊಂಡು ಭ್ರಷ್ಟಾಚಾರವನ್ನು ಟೀಕಿಸುತ್ತಾ, ಮತ್ತೊಂದೆಡೆ ಬಿಜೆಪಿಯ ನೂತನ ಮುಖ್ಯಮಂತ್ರಿಯೊಂದಿಗೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಅವರ ಈ ಎರಡು ದೋಣಿಯ ಪಯಣ ಬಂಗಾಳದ ರಾಜಕೀಯದಲ್ಲಿ ಹೊಸ ಆಯಾಮ ಪಡೆದುಕೊಂಡಿದೆ.
ಇದನ್ನೂ ಓದಿ : ದೀದಿಗೆ ಮಹಾ ಆಘಾತ – ಒಂದೇ ವಾರದಲ್ಲಿ 3ನೇ TMC ರಾಜ್ಯಸಭಾ ಸಂಸದ ರಾಜೀನಾಮೆ!


















