ನವದೆಹಲಿ : ಅಮೆರಿಕ ಮೂಲದ ರಿಯಲ್ ಎಸ್ಟೇಟ್ ತಂತ್ರಜ್ಞಾನ ದೈತ್ಯ ಕಂಪನಿ ‘ಓಪನ್‌ಡೋರ್’ (Opendoor) ಇದೀಗ ಭಾರತದಲ್ಲಿನ ತನ್ನ ಸಂಪೂರ್ಣ ವ್ಯವಹಾರ ಮತ್ತು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಕಂಪನಿಯ ಈ ದಿಢೀರ್ ನಿರ್ಧಾರದಿಂದಾಗಿ ಭಾರತೀಯ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 250 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ. ತನ್ನ ಪ್ರಮುಖ ಗ್ರಾಹಕ ವಲಯಕ್ಕೆ ಹತ್ತಿರವಾಗುವ ನಿಟ್ಟಿನಲ್ಲಿ ಕಾರ್ಯಾಚರಣೆಯ ಜವಾಬ್ದಾರಿಗಳನ್ನು ಅಮೆರಿಕಕ್ಕೆ ಮರುಸ್ಥಳಾಂತರಿಸುತ್ತಿರುವುದಾಗಿ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುತ್ತಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.
ಈ ಮಹತ್ವದ ನಿರ್ಧಾರದ ಕುರಿತು ಓಪನ್‌ಡೋರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕಾಜ್ ನೆಜಾಟಿಯನ್ ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಉದ್ಯೋಗಿಗಳಿಗೆ ಕಳುಹಿಸಲಾದ ಪತ್ರ ಹಾಗೂ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿನ ಪೋಸ್ಟ್‌ನಲ್ಲಿ, ಕಂಪನಿಯ ವ್ಯವಹಾರ ರೂಪಾಂತರ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದೀಚೆಗೆ ಪ್ರಮುಖ ಹುದ್ದೆಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದೀಗ ಭಾರತದ ಕಾರ್ಯಾಚರಣೆಗೆ ಸಂಪೂರ್ಣವಾಗಿ ತೆರೆ ಎಳೆಯಲಾಗುತ್ತಿದೆ ಎಂದು ಅವರು ಖಚಿತಪಡಿಸಿದ್ದಾರೆ.
ನಿರ್ಧಾರಕ್ಕೆ ಕಾರಣವೇನು?
ಭಾರತೀಯ ಘಟಕವನ್ನು ಮುಚ್ಚಲು ಪ್ರಮುಖ ಕಾರಣವನ್ನು ವಿವರಿಸಿರುವ ನೆಜಾಟಿಯನ್, “ನಮ್ಮ ಗ್ರಾಹಕರಿರುವುದು ಅಮೆರಿಕದಲ್ಲಿ. ಹಾಗಾಗಿ ಅವರಿಗೆ ಬೆಂಬಲ ನೀಡುವ ಕಾರ್ಯಾಚರಣಾ ಕೆಲಸಗಳು ಸಹ ಗ್ರಾಹಕರಿಗೆ ಹತ್ತಿರದಲ್ಲಿಯೇ ನಡೆಯುವುದು ಸೂಕ್ತ” ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ವಿಭಿನ್ನ ವ್ಯವಸ್ಥೆಗಳ ನಡುವಿನ ಮ್ಯಾನುಯಲ್ (ಮಾನವ ಚಾಲಿತ) ಕೆಲಸಗಳನ್ನು ನಿರ್ವಹಿಸಲು ಭಾರತದಲ್ಲಿ ದೊಡ್ಡ ತಂಡವನ್ನು ರಚಿಸಲಾಗಿತ್ತು. ಆದರೆ, ಪ್ರಸ್ತುತ ತಂತ್ರಜ್ಞಾನದ ಸುಧಾರಣೆ ಮತ್ತು ಅಮೆರಿಕದಲ್ಲಿ ಎಐ-ಚಾಲಿತ ತಂಡಗಳು ಸಕ್ರಿಯವಾಗಿರುವ ಕಾರಣ ವಿದೇಶಗಳಲ್ಲಿ ಇಂತಹ ಕಾರ್ಯಚರಣೆಗಳನ್ನು ಮುಂದುವರಿಸುವ ಅಗತ್ಯತೆ ಕಡಿಮೆಯಾಗಿದೆ ಎಂದು ಕಂಪನಿ ತಿಳಿಸಿದೆ.
ನೌಕರರ ಕಾರ್ಯಕ್ಷಮತೆಯೇ ಕಾರಣವಲ್ಲ
ಈ ಉದ್ಯೋಗ ಕಡಿತದ ಪ್ರಕ್ರಿಯೆಯು ಭಾರತೀಯ ತಂಡದ ಕಾರ್ಯಕ್ಷಮತೆಗೆ ಸಂಬಂಧಿಸಿದ್ದಲ್ಲ ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ. ಭಾರತದ ಉದ್ಯೋಗಿಗಳು ಅತ್ಯಂತ ಪ್ರತಿಭಾವಂತರಾಗಿದ್ದು, ಕಂಪನಿಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಶ್ಲಾಘನೀಯ. ಅವರು ಇತರ ಯಾವುದೇ ಸಂಸ್ಥೆಗಳಿಗೂ ಅತ್ಯುತ್ತಮ ಆಸ್ತಿಯಾಗಬಲ್ಲರು ಎಂದು ನೆಜಾಟಿಯನ್ ಹೊಗಳಿದ್ದಾರೆ. ಸದ್ಯ ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳಿಗೆ ಕಂಪನಿಯ ನಿಯಮಾವಳಿಗಳ ಪ್ರಕಾರ ಪರಿಹಾರ ಪ್ಯಾಕೇಜ್, ಹೊಸ ಉದ್ಯೋಗ ಹುಡುಕಾಟದ ಸೇವೆಗಳು ಸೇರಿದಂತೆ ಅಗತ್ಯ ಬೆಂಬಲವನ್ನು ನೀಡಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ. ಅಲ್ಲದೆ, ಪ್ರಮುಖ ಕೆಲಸಗಳ ಸುಗಮ ಹಸ್ತಾಂತರಕ್ಕಾಗಿ ಕೆಲವೇ ಕೆಲವು ಸಿಬ್ಬಂದಿ ತಾತ್ಕಾಲಿಕವಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
ಉದ್ಯೋಗಿಗಳ ಕಡಿತದ ಹೊರತಾಗಿಯೂ ಓಪನ್‌ಡೋರ್ ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿದೆ ಮತ್ತು ಕಂಪನಿಯ ಒಟ್ಟಾರೆ ವ್ಯವಹಾರದ ಕಾರ್ಯತಂತ್ರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಮ್ಯಾನುಯಲ್ ಪ್ರಕ್ರಿಯೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಕಾರ್ಯಾಚರಣೆಯನ್ನು ಸರಳಗೊಳಿಸುವುದು ಮತ್ತು ಏಕೀಕೃತ ಪ್ಲಾಟ್‌ಫಾರ್ಮ್ ನಿರ್ಮಿಸುವ ಮೂಲಕ ಅಮೆರಿಕದ ಮನೆಮಾಲೀಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವುದರ ಕಡೆಗೆ ಕಂಪನಿ ಗಮನ ಹರಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ತೃಣಮೂಲ ಕಾಂಗ್ರೆಸ್‌ನಲ್ಲಿ ಬಂಡಾಯದ ಬಿರುಗಾಳಿ ಮಧ್ಯೆ ಸಂಸದ ಬಾಬುಲ್ ನಿಗೂಢ ನಡೆ!


















