ಮೈಸೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಗಳವಾರ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ನೀಡಿದ್ದ ದೂರಿನ ಆಧಾರದ ಮೇಲೆ ಇಂದು ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ. ಸಿಎಂ ಪತ್ನಿ ಬಿ.ಎಂ.ಪಾರ್ವತಿ ಮುಡಾದಿಂದ ಪಡೆದ ಸೈಟ್ ಕ್ರಯ ಪತ್ರದ ಮುದ್ರಾಂಕ ಶುಲ್ಕದ ಬಗ್ಗೆ ಸ್ನೇಹಮಯಿ ಕೃಷ್ಣ ಆಕ್ಷೇಪಿಸಿದ್ದರು. ಹೀಗಾಗಿ ಸ್ನೇಹಮಯಿ ಕೃಷ್ಣ ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಸಿಎಂ ವಿರುದ್ಧ ಒಂದಿಲ್ಲೊಂದು ಆರೋಪಮಾಡಿ ಒತ್ತಡ ಹೇರುತ್ತಿದ್ದಾರೆ ಎಂದು ದೂರು ನೀಡಿದ್ದರು. ಹೀಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸಿಎಂ ಅವರನ್ನು ಸುಳ್ಳು ಆರೋಪಗಳಿಂದ ತೇಜೋವಧೆ ಮಾಡುತ್ತಿರುವುದರಿಂದ ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ಮೂಡುವಂತೆ ಪ್ರಯತ್ನಿಸುತ್ತಿದ್ದಾರೆ. ಟಿಜೆ ಅಬ್ರಹಾಂ ರವರು ನ್ಯಾಯಲಯದ ಮೊರೆ ಹೋಗಿ ಮುಡಾ ವಿಚಾರಕ್ಕೆ ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಕೋರಿಕೊಂಡಿದ್ದರಿಂದ ನ್ಯಾಯಲಯ ಲೋಕಾಯುಕ್ತ ತನಿಖೆ ನಡೆಸಲು ಆದೇಶ ಮಾಡಿದೆ. ಈಗ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ.
ಸ್ನೇಹಮಯಿ ಕೃಷ್ಣರವರು ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯುತ್ತಿಲ್ಲವೆಂದು ಮತ್ತು ತನಿಖಾಧಿಕಾರಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿಗೆ ದೂರು ನೀಡಿದ್ದಾರೆ. ಹೀಗೆ ಪ್ರತಿ ದಿನ ಒಂದಿಲ್ಲೊಂದು ವಿಚಾರ ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ದೂರಿನಲ್ಲಿ ಉಲ್ಲೇಖಿಸಿದ್ದರು.