ರಾಯ್ಪುರ: ಹೋಂ ವರ್ಕ್ ಪೂರ್ಣಗೊಳಿಸದ ಕಾರಣಕ್ಕೆ ಶಾಲೆಯ ಶಿಕ್ಷಕರೇ 5 ವರ್ಷದ ಬಾಲಕನನ್ನು ಹಗ್ಗದಿಂದ ಮರಕ್ಕೆ ತಲೆಕೆಳಗಾಗಿ ನೇತು ಹಾಕಿದ ಅಮಾನವೀಯ ಘಟನೆ ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಸೂರಜ್‌ಪುರ ಜಿಲ್ಲೆಯ ನಾರಾಯಣಪುರದಲ್ಲಿರುವ ಹಂಸ್ವಾನಿ ವಿದ್ಯಾ ಮಂದಿರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತ ಬಾಲಕ ಕೆಜಿ-2 ತರಗತಿಯಲ್ಲಿ ಕಲಿಯುತ್ತಿದ್ದಾನೆ. ಶಿಕ್ಷಕರು ನೀಡಿದ್ದ ಹೋಂ ವರ್ಕ್ ಮಾಡದ ಕಾರಣಕ್ಕೆ, “ಶಿಸ್ತು” ಕಲಿಸುವ ನೆಪದಲ್ಲಿ ಶಿಕ್ಷಕರು ಮಗುವನ್ನು ಹಗ್ಗದಿಂದ ಕಟ್ಟಿ ಶಾಲಾ ಆವರಣದಲ್ಲಿದ್ದ ಮರಕ್ಕೆ ಹಲವು ಗಂಟೆಗಳ ಕಾಲ ನೇತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳೀಯರೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟ ನಂತರ ಈ ಕ್ರೂರ ವರ್ತನೆ ಬೆಳಕಿಗೆ ಬಂದಿದೆ.
ಪೋಷಕರು, ಗ್ರಾಮಸ್ಥರ ಆಕ್ರೋಶ
ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಸ್ಥರು ಮತ್ತು ಪೋಷಕರು ಶಾಲೆಯ ಆವರಣದಲ್ಲಿ ಜಮಾಯಿಸಿ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಂತಹ ಅಮಾನವೀಯ ಶಿಕ್ಷೆ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ದೈಹಿಕ ಶಿಕ್ಷೆಯನ್ನು ನಿಷೇಧಿಸಲಾಗಿದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಬ್ಲಾಕ್ ಶಿಕ್ಷಣಾಧಿಕಾರಿ ಡಿ.ಎಸ್. ಲಕ್ರಾ ಅವರಿಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ನಿರ್ವಾಹಕ ಸುಭಾಷ್ ಶಿವಹರೆ, ಇದೊಂದು “ಸಣ್ಣ ಶಿಕ್ಷೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಮಗು ಸರಿಯಾಗಿ ಓದುತ್ತಿಲ್ಲವಾದ್ದರಿಂದ “ಭಯಪಡಿಸಲು” ಹೀಗೆ ಮಾಡಲಾಯಿತು ಎಂದು ಹೇಳುವ ಮೂಲಕ ವಿವಾದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇವರ ಹೇಳಿಕೆಯು ಶಾಲೆಯ ಶಿಕ್ಷಣ ವಿಧಾನ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ; ಪೇಶಾವರ ದಾಳಿಗೆ ಪ್ರತಿಯಾಗಿ ಪಾಕ್‌ನಿಂದ ವೈಮಾನಿಕ ದಾಳಿ : ಅಫ್ಘಾನಿಸ್ತಾನದಲ್ಲಿ 9 ಮಕ್ಕಳ ದುರ್ಮರಣ



















