ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ (ಏಪ್ರಿಲ್ 25, 2026) ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ರೋಚಕ ಪಂದ್ಯದಲ್ಲಿ ಕೇವಲ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ತವರಿನ ಅಭಿಮಾನಿಗಳ ಎದುರು ಅಕ್ಷರಶಃ ಅಬ್ಬರಿಸಿದ ಈ ಯುವ ಆಟಗಾರ, ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು.
ಹಿಂದಿನ ಸೋಲಿಗೆ ಮುಯ್ಯಿ ತೀರಿಸಿದ ಛಲ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಹಿಂದಿನ ಮುಖಾಮುಖಿಯಲ್ಲಿ ವೈಭವ್ ಸೂರ್ಯವಂಶಿ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಔಟ್ ಆಗಿದ್ದರು. ಆ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 212 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ, ಟೂರ್ನಿಯ ಮೊದಲ ಸೋಲನ್ನು ಅನುಭವಿಸಿತ್ತು. ಆ ಬಳಿಕ ತಂಡ ಸತತ ಹಿನ್ನಡೆ ಅನುಭವಿಸಿತ್ತು ಮತ್ತು ಏಪ್ರಿಲ್ 19 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಸೋಲಿನ ಬಳಿಕ ವೈಭವ್ ಮೈದಾನದಲ್ಲೇ ಕಣ್ಣೀರು ಹಾಕಿದ್ದರು. ಆ ಕಹಿನೆನಪುಗಳನ್ನು ಮರೆತು, ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಸ್ಪಷ್ಟ ಹಾಗೂ ಆಕ್ರಮಣಕಾರಿ ಉದ್ದೇಶದೊಂದಿಗೆ ಅಖಾಡಕ್ಕಿಳಿದಿದ್ದ ಅವರು, ಹೈದರಾಬಾದ್ ಬೌಲರ್‌ಗಳ ಬೆವರಿಳಿಸಿದರು.
ಮೊದಲ ಓವರ್‌ನಲ್ಲೇ ಶುರುವಾಯ್ತು ರಣಬೇಟೆ
ಪಂದ್ಯದ ಆರಂಭದಿಂದಲೇ ತಮ್ಮ ದೈತ್ಯ ಆಟಕ್ಕೆ ಮುಂದಾದ ವೈಭವ್, ಪ್ರಫುಲ್ ಹಿಂಗೆ ಎಸೆದ ಮೊದಲ ಓವರ್‌ನಲ್ಲೇ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಹಿಂದಿನ ಪಂದ್ಯದಲ್ಲಿ ಬಳಸಿದ್ದ ಶಾರ್ಟ್ ಬಾಲ್ ತಂತ್ರವನ್ನೇ ಪ್ರಫುಲ್ ಮತ್ತೆ ಪ್ರಯೋಗಿಸಲು ಮುಂದಾದಾಗ, ಲೆಗ್ ಸೈಡ್ ಕಡೆಗೆ ಭರ್ಜರಿ ಹೊಡೆತಗಳ ಮೂಲಕ ಚೆಂಡನ್ನು ಗ್ಯಾಲರಿಗಟ್ಟಿದರು. ಈ ಮೂಲಕ ಕೇವಲ ಆರು ಎಸೆತಗಳಲ್ಲಿ 30 ರನ್ ಗಳಿಸಿ ತಮ್ಮ ಬ್ಯಾಟಿಂಗ್ ವೈಖರಿಯನ್ನು ಜಗತ್ತಿಗೆ ಪರಿಚಯಿಸಿದರು. ಒಂದೆಡೆ ಜೊತೆಗಾರ ಧ್ರುವ್ ಜುರೆಲ್ ಕ್ರೀಸ್ ಕಚ್ಚಿ ನಿಲ್ಲಲು ತಾಳ್ಮೆಯ ಆಟವಾಡುತ್ತಿದ್ದರೆ, ಮತ್ತೊಂದೆಡೆ ವೈಭವ್ ಮಾತ್ರ ಹೈದರಾಬಾದ್ ಬೌಲಿಂಗ್ ವಿಭಾಗವನ್ನು ಅಕ್ಷರಶಃ ಧೂಳೀಪಟ ಮಾಡಿದರು.
ಶತಕದ ಸಂಭ್ರಮ ಹಾಗೂ ವಿಕೆಟ್ ಪತನ
ಹದಿನಾಲ್ಕನೇ ಓವರ್‌ನಲ್ಲಿ ಯುವ ವೇಗಿ ಸಾಕಿಬ್ ಹುಸೇನ್ ಅವರ ಬೌಲಿಂಗ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ವೈಭವ್ ತಮ್ಮ ಸ್ಫೋಟಕ ಶತಕವನ್ನು ಪೂರೈಸಿದರು. ಆ ಮೂಲಕ ಮೈದಾನದಲ್ಲಿದ್ದ ಸಹಸ್ರಾರು ಅಭಿಮಾನಿಗಳಿಗೆ ರಸದೌತಣ ನೀಡಿದರು. ಆದರೆ, ಶತಕ ಪೂರೈಸಿದ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಮರು ಎಸೆತದಲ್ಲೇ ಸಾಕಿಬ್ ಹುಸೇನ್ ಎಸೆದ ಸ್ಲೋವರ್ ಬಾಲ್ ಅನ್ನು ಅಂದಾಜಿಸುವಲ್ಲಿ ವೈಭವ್ ವಿಫಲರಾದರು. ರಿವರ್ಸ್ ಲ್ಯಾಪ್ ಮಾಡುವ ಯತ್ನದಲ್ಲಿ ಚೆಂಡು ನೇರವಾಗಿ ಪ್ಯಾಡ್‌ಗೆ ಬಡಿದ ಪರಿಣಾಮ, ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ಎಂದು ತೀರ್ಪು ನೀಡಿದರು.
ಐಪಿಎಲ್ ದಾಖಲೆಗಳ ಪುಟದಲ್ಲಿ ಅಚ್ಚಳಿಯದ ಹೆಸರು
ಈ 36 ಎಸೆತಗಳ ಶತಕವು ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ವೇಗದ ಶತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶೇಷವೆಂದರೆ, ಮೊದಲ ಮೂರು ಅತಿ ವೇಗದ ಶತಕಗಳ ಪಟ್ಟಿಯಲ್ಲಿ ಎರಡು ಶತಕಗಳು ಈ 15 ವರ್ಷದ ಪೋರನ ಹೆಸರಿನಲ್ಲಿಯೇ ಇವೆ. ಕಳೆದ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ವೈಭವ್ ಸೂರ್ಯವಂಶಿ ಬರೆದಿದ್ದರು. ಇದೀಗ ತಮ್ಮ ಅದ್ಭುತ ಫಾರ್ಮ್ ಮುಂದುವರಿಸುವ ಮೂಲಕ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಭರವಸೆಯ ಹೊಸ ಅಧ್ಯಾಯವನ್ನು ಬರೆದಿದ್ದಾರೆ.
ಇದನ್ನೂ ಓದಿ : ‘ಅವರು ಮಾಡಬಹುದಾದರೆ, ನಾವೇಕೆ ಸಾಧ್ಯವಿಲ್ಲ?’ : 265 ರನ್ ಚೇಸಿಂಗ್ ಹಿಂದಿನ ‘ಅಯ್ಯರ್’ ಸರಳ ಮಂತ್ರ!



















