ಬೆಂಗಳೂರು : ಯೂತ್ ಕಾಂಗ್ರೆಸ್ ಕಾರ್ಯಕಾರಣಿ ಸಭೆ ವೇಳೆ ಪದಾಧಿಕಾರಿಗಳನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ KPCC ಕಚೇರಿಯಲ್ಲಿ ಭಾರೀ ಹೈಡ್ರಾಮವೇ ನಡೆದಿದೆ.

ಸಭೆ ನಡೆಯುತ್ತಿದ್ದ ವೇಳೆ ಎರಡು ಗುಂಪುಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಕೈ ಕೈ ಮೀಲಾಯಿಸುವ ಮಟ್ಟಕ್ಕೆ ತಲುಪಿದೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸಭಾಂಗಣದ ಹೊರಭಾಗದಲ್ಲಿಯೂ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಗಲಾಟೆ ತೀವ್ರಗೊಂಡ ಹಿನ್ನೆಲೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (KPYCC) ಅಧ್ಯಕ್ಷ ಮಂಜುನಾಥ ಗೌಡ ಹಾಗೂ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಗಂ ಭಂಡಾರಿ ಅವರನ್ನು ಕೆಲ ಕಾರ್ಯಕರ್ತರು ಘೇರಾವ್ ಮಾಡಿದರು.
ಘಟನೆಯ ಮಾಹಿತಿ ತಿಳಿದು ಹೈಗ್ರೌಂಡ್ಸ್ ಪೊಲೀಸರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಅಧಿಕಾರಿಗಳು ಗಲಾಟೆಗೆ ಕಾರಣವಾದ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ದೀಪಿಕಾ ರೆಡ್ಡಿ ಸೇರಿದಂತೆ ಕೆಲವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಕೆಪಿಸಿಸಿ ಕಚೇರಿ ಎದುರು ದೊಡ್ಡ ಸಂಖ್ಯೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು, ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಿದ್ದಾರೆ.
ಇದನ್ನೂ ಓದಿ : ರೈಲು ಪ್ರಯಾಣಿದ ವೇಳೆ ಊಟ-ತಿಂಡಿಗೆ ಹೆಚ್ಚಿನ ಹಣ ಕೇಳಿದ್ರೆ ಯಾರಿಗೆ ದೂರು ನೀಡಬೇಕು?


















