ಬೆಂಗಳೂರು : 10-12 ಗಂಟೆ ರೈಲು ಪ್ರಯಾಣ ಮಾಡಬೇಕಾದರೆ ಮಧ್ಯದಲ್ಲಿ ಊಟ-ತಿಂಡಿ ಮಾಡಬೇಕಾಗುತ್ತದೆ. ರೈಲಿನಲ್ಲಿಯೇ ಊಟ-ತಿಂಡಿಯ ಸರಬರಾಜು ಆಗುವುದರಿಂದ, ಮಾರಾಟಗಾರರು ನಮ್ಮ ಬರ್ತ್ ಅಥವಾ ಸೀಟಿನ ಬಳಿಯೇ ಬಂದು ಪೂರೈಕೆ ಮಾಡುವುದರಿಂದ ಹೆಚ್ಚಿನ ಜನ ಬಾಕ್ಸ್ ಕಟ್ಟಿಕೊಂಡು ಹೋಗುವುದಿಲ್ಲ. ರೈಲಿನಲ್ಲೇ ಊಟ-ತಿಂಡಿ ಖರೀದಿಸುತ್ತಾರೆ. ಆದರೆ, ಹೆಚ್ಚಿನ ಸಲ ಊಟ-ತಿಂಡಿ ಮಾರುವವರು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಸಾಧ್ಯತೆ ಇರುತ್ತದೆ.
ಊಟ-ತಿಂಡಿ ಮಾರಾಟ ಮಾಡುವವರು ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಚಾರ್ಜ್ ಮಾಡಬಾರದು ಎಂದು ಐಆರ್ ಸಿಟಿಸಿ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಯಾರಾದರೂ ಹೆಚ್ಚಿನ ಹಣ ಕೇಳಿದರೆ, ಆಗ ಪ್ರಯಾಣಿಕರು ಯಾವುದೇ ಮುಲಾಜಿಲ್ಲದೆ ದೂರು ನೀಡಲು ವ್ಯವಸ್ಥೆ ಮಾಡಲಾಗಿದೆ.
ಊಟ, ತಿಂಡಿ, ಪಾನೀಯಗಳನ್ನು ಮಾರಾಟ ಮಾಡುವ ವೆಂಡರ್ ಗಳು ಮೆನು ಕಾರ್ಡ್ ಅಥವಾ ದರ ಪಟ್ಟಿ ತೋರಿಸಬೇಕು. ಐಆರ್ ಸಿಟಿಸಿ ನಿಯಮಗಳಂತೆ ಮೆನು ಕಾರ್ಡ್ ಇರಬೇಕು. ಮೆನು ಕಾರ್ಡ್ ನಲ್ಲಿ ಇರುವಷ್ಟು ಹಣವನ್ನೇ ಪ್ರಯಾಣಿಕರಿಂದ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮವನ್ನು ಯಾರಾದರೂ ಉಲ್ಲಂಘಿಸಿದರೆ, ಅವರ ವಿರುದ್ಧ ದೂರು ನೀಡಲು ಅವಕಾಶ ನೀಡಲಾಗಿದೆ.
ಪ್ರಯಾಣಿಕರು ಮೊದಲು ಬಿಲ್ ಕೇಳಬೇಕು. ಮೆನು ಕಾರ್ಡ್ ಚೆಕ್ ಮಾಡಬೇಕು. ಹಾಗೊಂದು ವೇಳೆ ಹೆಚ್ಚಿನ ಚಾರ್ಜ್ ಕೇಳಿದರೆ, ಕೂಡಲೇ 139 ಹೆಲ್ಪ್ ಲೈನ್ ಗೆ ಮೆಸೇಜ್ ಕಳುಹಿಸಬೇಕು. ಟ್ರೈನ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಹಾಗೂ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿ ಎಫ್) ಗೆ ದೂರು ನೀಡಬಹುದು. ಪಿಎನ್ ಆರ್ ನಂಬರ್, ಕೋಚ್, ಸೀಟ್ ನಂಬರ್ ನಮೂದಿಸಿ ದೂರು ನೀಡಬಹುದು. ನೀವೇನಾದರೂ ಹೆಚ್ಚುವರಿ ಹಣ ನೀಡಿದ್ದರೆ, ಅದನ್ನು ರಿಫಂಡ್ ಕೂಡ ಮಾಡಲಾಗುತ್ತದೆ. ವೆಂಡರ್ ಗಳಿಗೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ : “ಕನ್ಯೆಯ ಮೌನವೇ ಮದುವೆಗೆ ಸಮ್ಮತಿ” : ಅಫ್ಘನ್ ತಾಲಿಬಾನ್ ಸರ್ಕಾರದಿಂದ ಬಾಲ್ಯವಿವಾಹ ಕಾನೂನುಬದ್ಧ!


















