ಪ್ಯಾರಿಸ್: ವಿಶ್ವಪ್ರಸಿದ್ಧ ಫ್ರಾನ್ಸ್ ವಾರ್ಷಿಕ ಸಂಗೀತ ಹಬ್ಬ ‘ಫೆಟೆ ಡಿ ಲಾ ಮ್ಯೂಸಿಕ್’ (Fête de la Musique) ಈ ಬಾರಿ ಅತ್ಯಂತ ಬೀಭತ್ಸ, ಅಶ್ಲೀಲ ಕೃತ್ಯಗಳಿಗೆ ಸಾಕ್ಷಿಯಾಗಿದೆ. ದೇಶಾದ್ಯಂತ ಲಕ್ಷಾಂತರ ಪ್ರವಾಸಿಗರು ಮತ್ತು ಸ್ಥಳೀಯರು ಭಾಗವಹಿಸಿದ್ದ ಈ ಬೀದಿ ಸಂಗೀತ ಉತ್ಸವವು ರಾತ್ರೋರಾತ್ರಿ ಹಿಂಸಾಚಾರ, ರಕ್ತಪಾತ ಮತ್ತು ಸಾಮೂಹಿಕ ಅತ್ಯಾಚಾರದ ತಾಣವಾಗಿ ಮಾರ್ಪಟ್ಟಿದೆ. ಹಬ್ಬದ ನೆಪದಲ್ಲಿ ಬಂದ ಕಿಡಿಗೇಡಿಗಳು ಜನಸಂದಣಿಯ ಮಧ್ಯೆ ಮಹಿಳೆಯರಿಗೆ ಸಿರಿಂಜ್‌ಗಳ (ಇಂಜೆಕ್ಷನ್ ಸೂಜಿ) ಮೂಲಕ ನಿಗೂಢ ದ್ರಾವಣವನ್ನು ಚುಚ್ಚಿ ವಿಕೃತಿ ಮೆರೆದಿದ್ದು, ಇಡೀ ಫ್ರಾನ್ಸ್ ದೇಶವೇ ತಲೆತಗ್ಗಿಸುವಂತೆ ಮಾಡಿದೆ.
ಜನಸಂದಣಿಯಿಂದ ಕಿಕ್ಕಿರಿದು ತುಂಬಿದ್ದ ಪ್ಯಾರಿಸ್ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ‘ನೀಡಲ್ ಸ್ಪೈಕಿಂಗ್’ (Needle Spiking) ಅಥವಾ ಸೂಜಿ ಚುಚ್ಚುವ ಭೀಕರ ಕೃತ್ಯ ಎಸಗಲಾಗಿದೆ. ಬೌಲೆವಾರ್ಡ್ ಡಿ ಲಾ ಮ್ಯಾಡೆಲಿನ್ ಪ್ರದೇಶದಲ್ಲಿ ಅಪರಿಚಿತರು ಸೂಜಿ ಚುಚ್ಚಿದ ತಕ್ಷಣ ಮಹಿಳೆಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಜೊತೆಗೆ, ಉತ್ಸವದ ಆವರಣದಲ್ಲಿ ಇಬ್ಬರು ಮಹಿಳೆಯರ ಮೇಲೆ ಭೀಕರ ಅತ್ಯಾಚಾರ ಎಸಗಿರುವ ದೂರುಗಳು ದಾಖಲಾಗಿವೆ. ಸಂತ್ರಸ್ತರ ಪೈಕಿ ಕಿರಿಯ ವಯಸ್ಸಿನ ಯುವತಿಯರೂ ಸೇರಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಚುಚ್ಚಲಾದ ಸೂಜಿಯಲ್ಲಿ ಯಾವ ರೀತಿಯ ಮಾದಕ ದ್ರವ್ಯವಿತ್ತು ಎಂಬುದರ ಕುರಿತು ವೈದ್ಯಕೀಯ ತನಿಖೆ ನಡೆಯುತ್ತಿದೆ.
ಕಾಲ್ತುಳಿತದ ಆತಂಕ ಮೂಡಿಸಿದ ಗ್ಯಾಂಗ್ ವಾರ್
ಪ್ಯಾರಿಸ್‌ನ ಪ್ರಮುಖ ಕೇಂದ್ರಗಳಾದ ಚಾಟೆಲೆಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿವಿಧ ಗುಂಪುಗಳ ನಡುವೆ ಭೀಕರ ಚಾಕು ಇರಿತ ಹಾಗೂ ಗ್ಯಾಂಗ್ ವಾರ್‌ಗಳು ಕೂಡ ನಡೆದಿವೆ. ಬ್ರಿಟನ್‌ನಿಂದ ಬಂದಿದ್ದ ಪ್ರವಾಸಿಗರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, “ಅಲ್ಲಿನ ವಾತಾವರಣ ಅತ್ಯಂತ ಅಪಾಯಕಾರಿಯಾಗಿತ್ತು. ಕಿರಿದಾದ ರಸ್ತೆಗಳಲ್ಲಿ ದಿಢೀರನೆ ಗಲಾಟೆಗಳು ಆರಂಭವಾದಾಗ ಜನರೆಲ್ಲಾ ಪ್ರಾಣಭಯದಿಂದ ಓಡಲಾರಂಭಿಸಿದರು. ಒಂದು ಕ್ಷಣ ಕಾಲ್ತುಳಿತ ನಡೆದು ದೊಡ್ಡ ದುರಂತವೇ ಸಂಭವಿಸುತ್ತದೆ ಎಂಬ ಭೀತಿ ಎದುರಾಗಿತ್ತು” ಎಂದು ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
240ಕ್ಕೂ ಹೆಚ್ಚು ಕಟುಕರು ಅರೆಸ್ಟ್; ಭದ್ರತಾ ಲೋಪದ ಬಗ್ಗೆ ಆಕ್ರೋಶ
ಹಿಂಸಾಚಾರ ನಿಯಂತ್ರಿಸಲು ಫ್ರೆಂಚ್ ಸರ್ಕಾರವು ಸಾವಿರಾರು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಡ್ರೋನ್‌ಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ಇಳಿಸಿತ್ತು. ಇಡೀ ರಾತ್ರಿ ನಡೆದ ಜಾಲಾಟದಲ್ಲಿ ದೇಶಾದ್ಯಂತ ಕೃತ್ಯದಲ್ಲಿ ಭಾಗಿಯಾಗಿದ್ದ ಸುಮಾರು 243 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಸಾರ್ವಜನಿಕ ಸಮಾರಂಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಫ್ರೆಂಚ್ ಸರ್ಕಾರದ ವಿರುದ್ಧ ಸಾರ್ವಜನಿಕರು ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.



















