ದಾವಣಗೆರೆ: ಮತ್ತೊಬ್ಬ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಬಂಧಿತನನ್ನು 20 ವರ್ಷದ ಸುಯೇಲ್ ಎಂದು ಗುರುತಿಸಲಾಗಿದ್ದು, ಈತನ ಮೂಲ ಉತ್ತರ ಪ್ರದೇಶ ಆಗಿದೆ. ಸುಯೇಲ್ ಹರಿಹರ ನಗರದಲ್ಲಿ ವಾಸವಿದ್ದು, ಅಲ್ಲಿನ ಸಮೀಪದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಸುಯೇಲ್ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ನಿರಂತರ ಸಂಪರ್ಕದಲ್ಲಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೆ ತುಮಕೂರು ಟೌನ್ ಪೊಲೀಸ್ ಠಾಣೆಯವರು ದಾವಣಗೆರೆ ಮೂಲದ ಜಮೀರ್ ಖಾನ್ ಮತ್ತು ಅಲ್ಲಾಭಕ್ಷಿ ಎಂಬವರನ್ನು ಬಂಧಿಸಿದ್ದರು. ಅವರಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಮುಂದಿನ ತನಿಖೆ ಮುಂದುವರಿಸಿ ಇದೀಗ ಮತ್ತೊಬ್ಬ ಶಂಕಿತನನ್ನು ಬಂಧಿಸಲಾಗಿದೆ. ಬಂಧಿತನಿಗೆ ಪಾಕಿಸ್ತಾನದ ಉಗ್ರರ ಜೊತೆ ನಂಟು ಹೊಂದಿರುವ ಅನುಮಾನ ಹಿನ್ನೆಲೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.



















