ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸರ್ಕಾರಿ ನಿವಾಸವನ್ನು ಆಡಳಿತಾರೂಢ ಬಿಜೆಪಿ ‘ಶೀಶ್ ಮಹಲ್’ ಎಂದು ಕರೆಯುತ್ತಲೇ ಬಂದಿದ್ದು, ಈಗಾಗಲೇ ಈ ಬಂಗೆಯನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸುವುದಾಗಿ ಘೋಷಿಸಿದೆ. ಅದರ ಅಂಗವಾಗಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳನ್ನು ಈ ಬಂಗಲೆಯ ಪ್ರವಾಸಕ್ಕೆ ದೆಹಲಿ ಸರ್ಕಾರ ಕಳುಹಿಸಿದೆ.
ಇದೊಂದು “ಐಷಾರಾಮಿ” ಬಂಗಲೆ ಎಂದು ಬಣ್ಣಿಸಿರುವ ಬಿಜೆಪಿ, 30 ಲಕ್ಷ ರೂ. ಮೌಲ್ಯದ ಟಿವಿ, 11.56 ಲಕ್ಷ ರೂ. ಗೊಂಚಲು ದೀಪ (chandelier), 6.71 ಲಕ್ಷ ರೂ.ಗಳ ಪೂಜಾಗೃಹ ಮತ್ತು 5.47 ಲಕ್ಷ ರೂ. ಟು-ಸೀಟರ್ ಸೋಫಾ ಸೇರಿದಂತೆ ಹಲವು ವಸ್ತುಗಳ ಬೆಲೆಯ ಪಟ್ಟಿಯನ್ನು ಪ್ರದರ್ಶಿಸಿದೆ. 6, ಫ್ಲಾಗ್‌ಸ್ಟಾಫ್ ರೋಡ್‌ನಲ್ಲಿರುವ (6, Flagstaff Road) ಈ ನಿವಾಸದ ವಸ್ತುಗಳಿಗೆ ಬೆಲೆ ಟ್ಯಾಗ್ ಹಾಕಿ ಮಾಧ್ಯಮಗಳಿಗೆ ತೋರಿಸಿದ ದೆಹಲಿ ಸಚಿವ ಪರ್ವೇಶ್ ವರ್ಮಾ, “ಅರವಿಂದ ಕೇಜ್ರಿವಾಲ್ ಅವರು ಸಾರ್ವಜನಿಕರ ಹಣವನ್ನು ಹೇಗೆ ಖರ್ಚು ಮಾಡಿದ್ದಾರೆ ಎಂಬುದನ್ನು ನಾವು ತೋರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಸರ್ಕಾರಿ ವಾಹನ ಅಥವಾ ಸರ್ಕಾರಿ ನಿವಾಸ ಬಳಸುವುದಿಲ್ಲ ಎನ್ನುತ್ತಿದ್ದ ಕೇಜ್ರಿವಾಲ್, ಈ ಬಂಗಲೆಗಾಗಿ 56 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ವೇಳೆ ಜನರು ಸಾಯುತ್ತಿದ್ದಾಗ ‘ಶೀಶ್ ಮಹಲ್’ ನಿರ್ಮಿಸಲಾಗಿದೆ ಎಂದೂ ವರ್ಮಾ ಟೀಕಿಸಿದ್ದು, 2025ರ ವಿಧಾನಸಭೆ ಚುನಾವಣೆಯಲ್ಲಿ 2013ರಿಂದ ಕೇಜ್ರಿವಾಲ್ ಗೆಲ್ಲುತ್ತಿದ್ದ ನವದೆಹಲಿ ಕ್ಷೇತ್ರದಲ್ಲಿ ಅವರನ್ನು ವರ್ಮಾ ಸೋಲಿಸಿದ್ದರು.
‘ಫೇಸ್‌ಬುಕ್ ಲೈವ್ ರೂಮ್’ ಮತ್ತು ಐಷಾರಾಮಿ ಸೌಲಭ್ಯಗಳು
ಲೋಕೋಪಯೋಗಿ ಇಲಾಖೆಯ (PWD) ಸಚಿವರೂ ಆಗಿರುವ ವರ್ಮಾ, ಮಾಧ್ಯಮಗಳಿಗೆ ಬಂಗಲೆಯ ಸುತ್ತಾಟ ತೋರಿಸುವಾಗ ‘ಫೇಸ್‌ಬುಕ್ ಲೈವ್ ರೂಮ್’ ಅನ್ನೂ ಪರಿಚಯಿಸಿದ್ದಾರೆ. ಹರಿದ ಸೀಟ್ ಇರುವ ಮರದ ಕುರ್ಚಿಯೊಂದನ್ನು ತೋರಿಸಿದ ಅವರು, ತಾವು ಎಷ್ಟು ಸರಳ ಜೀವನ ನಡೆಸುತ್ತಿದ್ದೇವೆ ಎಂಬುದನ್ನು ಜನರಿಗೆ ತೋರಿಸಲು ಕೇಜ್ರಿವಾಲ್ ಇಲ್ಲಿಂದಲೇ ಫೇಸ್‌ಬುಕ್ ಲೈವ್ ಮಾಡುತ್ತಿದ್ದರು ಎಂದು ದೂರಿದ್ದಾರೆ. ಪಿಡಬ್ಲ್ಯೂಡಿ ನಿರ್ವಹಿಸುವ ಈ ಬಂಗಲೆಯಲ್ಲಿ ಎಂಟು ಬೆಡ್‌ರೂಮ್‌ಗಳು, 12 ಶೌಚಾಲಯಗಳು, ಜಕುಜಿ ಬಾತ್, ಸ್ಪಾ, ಐದು ಒಎಲ್‌ಇಡಿ (OLED) ಟಿವಿಗಳು ಸೇರಿದಂತೆ ಹಲವು ಸೌಲಭ್ಯಗಳಿವೆ.
ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ‘ಶೀಶ್ ಮಹಲ್’ ಅನ್ನು ಸಾರ್ವಜನಿಕ ವೀಕ್ಷಣೆಗೂ ತೆರೆಯಲಿದ್ದೇವೆ ಎಂದು ಸರ್ಕಾರ ತಿಳಿಸಿದೆ. 2015ರಿಂದ 2024ರವರೆಗೆ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದಾಗ ವಾಸವಿದ್ದ ಈ ಬಂಗಲೆಯನ್ನು, ಆಪ್ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಎತ್ತಿ ತೋರಿಸಲು ಬಿಜೆಪಿ ‘ಶೀಶ್ ಮಹಲ್’ ಎಂದು ನಾಮಕರಣ ಮಾಡಿತ್ತು.
ಯಮುನಾ ಮಾಲಿನ್ಯದಿಂದ ಗಮನ ಬೇರೆಡೆ ಸೆಳೆಯುವ ಯತ್ನ
ಸರ್ಕಾರಿ ನಿವಾಸವನ್ನು ವೀಕ್ಷಣೆಗೆ ತೆರೆಯುವ ದೆಹಲಿ ಸರ್ಕಾರದ ನಿರ್ಧಾರವು ಯಮುನಾ ನದಿ ಮಾಲಿನ್ಯದ ವಿಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಆಮ್ ಆದ್ಮಿ ಪಕ್ಷ (AAP) ತಿರುಗೇಟು ನೀಡಿದೆ. “ವರ್ಮಾ ಅವರು ಏನು ಬೇಕಾದರೂ ಮಾತನಾಡಲಿ, ಆದರೆ ಯಮುನಾ ವಿಚಾರದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನದಿಯ ಸ್ಥಿತಿಯ ಬಗ್ಗೆ ಅವರನ್ನು ಮತ್ತೆ ಮತ್ತೆ ಪ್ರಶ್ನಿಸಿ ಉತ್ತರ ಕೇಳುತ್ತೇವೆ” ಎಂದು ಆಪ್ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಸಾವಿರಾರು ಮೀನುಗಳು ಸತ್ತಿದ್ದೇಕೆ ಎಂಬುದನ್ನು ಸಚಿವರು ದೆಹಲಿಯ ಜನತೆಗೆ ತಿಳಿಸಬೇಕು ಹಾಗೂ ಈ ಪ್ರಶ್ನೆಗಳಿಂದ ಓಡಿಹೋಗಲು ಆಗುವುದಿಲ್ಲ ಎಂದು ಅವರು ಆಗ್ರಹಿಸಿದ್ದಾರೆ.
ಅಂದಾಜು ವೆಚ್ಚಕ್ಕಿಂತ ಶೇ. 342ರಷ್ಟು ಹೆಚ್ಚು ಖರ್ಚು: ಸಿಎಜಿ ವರದಿ
ದೆಹಲಿ ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ (CAG) ವರದಿಯ ಪ್ರಕಾರ, ಕೇಜ್ರಿವಾಲ್ ಅವರ ಹಿಂದಿನ ಅಧಿಕೃತ ನಿವಾಸದ ನವೀಕರಣ ಕಾಮಗಾರಿಯನ್ನು ಅಂದಾಜು ವೆಚ್ಚಕ್ಕಿಂತ ಶೇ. 342ರಷ್ಟು ಹೆಚ್ಚು, ಅಂದರೆ 33.66 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿತ್ತು. ಈ 33.66 ಕೋಟಿ ರೂ. ಪೈಕಿ 18.88 ಕೋಟಿ ರೂ.ಗಳನ್ನು ‘ಉತ್ತಮ ಗುಣಮಟ್ಟದ, ಕಲಾತ್ಮಕ, ಪುರಾತನ ಮತ್ತು ಅಲಂಕಾರಿಕ’ ವಸ್ತುಗಳಿಗಾಗಿ ವ್ಯಯಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಅಲ್ಲದೆ ಬಂಗಲೆಯಲ್ಲಿ ಹೆಚ್ಚುವರಿ ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಹಾಗೂ ಕ್ಯಾಂಪ್ ಕಚೇರಿ ಮತ್ತು ಸಿಬ್ಬಂದಿ ಬ್ಲಾಕ್‌ನಲ್ಲಿ ಬದಲಾವಣೆಗಳನ್ನು ಮಾಡುವಲ್ಲಿ ಪಿಡಬ್ಲ್ಯೂಡಿಯಿಂದ ಹಲವು ಅಕ್ರಮಗಳು ನಡೆದಿರುವುದನ್ನೂ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.


















