ಬೆಂಗಳೂರು : ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಹಿನ್ನೆಲೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಇಂದು ಸುದ್ದಿಗೋಷ್ಠಿ ನಡೆಸಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜ ಅರಸ್ ಅವರು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವದರೆ ಮುಷ್ಕರ ಎದುರಿಸಬೇಕು ಎಂದು ತಿಳಿಸಿದ್ದಾರೆ.

ಸುಮಾರು 1.25 ಲಕ್ಷಕ್ಕೂ ಹೆಚ್ಚು ನೌಕರರು ಈ ಹೋರಾಟದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಜಂಟಿ ಕ್ರಿಯಾ ಸಮಿತಿ ಹಲವು ಬೇಡಿಕೆಗಳನ್ನು ಮುಂದಿಟ್ಟು, ಸರ್ಕಾರದೊಂದಿಗೆ ನಡೆದಿರುವ 12 ಸುತ್ತಿನ ಮಾತುಕತೆಗಳು ಫಲಕಾರಿಯಾಗಿಲ್ಲ ಎಂದು ಆರೋಪಿಸಿದೆ.
ಸರ್ಕಾರ 38 ತಿಂಗಳ ಹಿಂಬಾಕಿ ವೇತನದ ಬದಲು 26 ತಿಂಗಳಷ್ಟನ್ನು ನೀಡಲು ಸಿದ್ಧವಿದ್ದರೂ, ಇದನ್ನು ನೌಕರರು ತಿರಸ್ಕರಿಸಿದ್ದಾರೆ. ಉಳಿದ 12 ತಿಂಗಳ ಬಾಕಿಯನ್ನೂ ಸೇರಿಸಿ ಸಂಪೂರ್ಣ ಮೊತ್ತವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ನೌಕರರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, “ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ” ಎಂದಿದ್ದಾರೆ. ಮೇ 20ರ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ ಎಂದು ಘೋಷಿಸಲಾಗಿದೆ.
ನೌಕರರ ಪ್ರಮುಖ ಬೇಡಿಕೆಗಳು:
- 38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು
- 2024 ಜನವರಿ 1ರಿಂದ ಮೂಲ ವೇತನಕ್ಕೆ 25% ಹೆಚ್ಚಳ
- 31% ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು
- ಬಾಟಾ ಹಾಗೂ ಇತರೆ ಭತ್ಯೆಗಳ ಹೆಚ್ಚಳ
- ಕೋವಿಡ್ ಅವಧಿಯ ಅರಿಯರ್ಸ್ ಪಾವತಿ
- 26 ತಿಂಗಳ ಬಾಕಿ 1272 ಕೋಟಿ ಒಂದೇ ಕಂತಿನಲ್ಲಿ ಬಿಡುಗಡೆಗೆ ಒತ್ತಯ.
ಜನರಿಗೆ ಏನು ಪರಿಣಾಮ?
ಮುಷ್ಕರ ಜಾರಿಗೆ ಬಂದರೆ, KSRTC, BMTC ಸೇರಿದಂತೆ ಎಲ್ಲಾ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯದ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಪರ್ಯಾಯ ವ್ಯವಸ್ಥೆ ಹುಡುಕಬೇಕಾಗಬಹುದು. ಸರ್ಕಾರ ಮತ್ತು ನೌಕರರ ನಡುವೆ ಇನ್ನೂ ಮಾತುಕತೆ ಸಾಧ್ಯತೆ ಇರುವುದರಿಂದ, ಅಂತಿಮ ನಿರ್ಧಾರ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಇದನ್ನೂ ಓದಿ : ಚಾ.ನಗರದಲ್ಲಿ ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ ‘ಬಿಳಿ ಜಿಂಕೆ’.. ವಿಡಿಯೋ ವೈರಲ್!


















