ಬೆಂಗಳೂರು : ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ತುಸು ವ್ಯತ್ಯಯವಾಗಿದೆ. ಇದರಿಂದಾಗಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ LPG ಸಿಲಿಂಡರ್ ಲಭಿಸುತ್ತಿಲ್ಲ. ಇನ್ನೂ ಕೆಲವರು ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ಕ್ಯಾಶ್ ಮೆಮೋಗಿಂತ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಹಾಗಾಗಿ, ಸಾರ್ವಜನಿಕರು ಎಲ್ ಪಿಜಿ ಸಿಲಿಂಡರ್ ಅನ್ನು ಮನೆಗೆ ತಂದು ಕೊಡುವಾಗ ಹೆಚ್ಚಿನ ಹಣ ಕೇಳಿದರೆ ದೂರು ನೀಡಬಹುದಾಗಿದೆ.
ಎಲ್‌ಪಿಜಿ ಡೆಲಿವರಿ ವೇಳೆ ಯಾರಾದರೂ ಹೆಚ್ಚಿನ ಹಣ ಕೇಳಿದರೆ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ದೂರು ನೀಡಬಹುದು. ಇಂಡೇನ್, ಎಚ್ ಪಿ ಮತ್ತು ಭಾರತ್ ಗ್ಯಾಸ್ ಸೇರಿ ಎಲ್ಲ ಕಂಪನಿಗಳಿಗೆ ಅನ್ವಯವಾಗುವ 1800-2333-555 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ಇಲ್ಲವೇ ನಿಮ್ಮ ಗ್ಯಾಸ್ ಕಂಪನಿಯ ವೆಬ್ ಸೈಟ್ ಅಥವಾ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದಾಗಿದೆ.
ನಿಮ್ಮ ಗ್ಯಾಸ್ ಏಜೆನ್ಸಿಯ ಮ್ಯಾನೇಜರ್ ಅಥವಾ ಮಾಲೀಕರಿಗೆ ನೇರವಾಗಿ ಕರೆ ಮಾಡಿ ದೂರು ನೀಡಬಹುದು. ಪ್ರತಿಯೊಂದು ಗ್ಯಾಸ್ ಏಜೆನ್ಸಿಯಲ್ಲೂ ದೂರು ಪುಸ್ತಕ (Complaint Book) ಇರಲೇಬೇಕು. ಅಲ್ಲಿಯೂ ದೂರನ್ನು ದಾಖಲಿಸಬಹುದು. ಸ್ಥಳೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ನಿಮ್ಮ ಜಿಲ್ಲೆ ಅಥವಾ ತಾಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಬಹುದು. ಇದಲ್ಲದೆ, ಗ್ಯಾಸ್ ಕಂಪನಿಯ ಅಧಿಕೃತ ಹ್ಯಾಂಡಲ್ ಮತ್ತು ಪೆಟ್ರೋಲಿಯಂ ಸಚಿವಾಲಯವನ್ನು ಟ್ಯಾಗ್ ಮಾಡಿ ದೂರು ನೀಡಬಹುದು. ಪೆಟ್ರೋಲಿಯಂ ಸಚಿವಾಲಯದ ಅಧಿಕೃತ ದೂರು ನಿರ್ವಹಣಾ ಹ್ಯಾಂಡಲ್- @MoPNG_eSeva.
ನಿಯಮ ಹೇಳುವುದೇನು?
ಸಿಲಿಂಡರ್ ವಿತರಿಸುವಾಗ ನೀಡುವ ಬಿಲ್ ನಲ್ಲಿ ಎಷ್ಟು ಮೊತ್ತವಿದೆಯೋ ಅಷ್ಟನ್ನೇ ಪಾವತಿಸಬೇಕು. ಬಿಲ್ ನೀಡದಿದ್ದರೆ ಹಣ ನೀಡಬಾರದು. ತೈಲ ಕಂಪನಿಗಳ ನಿಯಮದಂತೆ, ಸಿಲಿಂಡರ್ ಅನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸಲು ಯಾವುದೇ ಹೆಚ್ಚುವರಿ ‘ಡೆಲಿವರಿ ಚಾರ್ಜ್’ ನೀಡುವ ಅಗತ್ಯವಿಲ್ಲ. ಏಕೆಂದರೆ ಬಿಲ್ ನಲ್ಲಿ ಆ ಮೊತ್ತ ಸೇರಿರುತ್ತದೆ.
ಇದನ್ನೂ ಓದಿ : IPL ಕಂಡ ಶ್ರೇಷ್ಠ ಬ್ಯಾಟರ್, ಶೀಘ್ರದಲ್ಲೇ 10,000 ರನ್ ಕಲೆಹಾಕಲಿದ್ದಾರೆ : ವಿರಾಟ್ ಬಗ್ಗೆ ಮಿಚೆಲ್ ಮೆಕ್ಲೆನಘನ್ ಭವಿಷ್ಯ



















