ಇಸ್ಲಾಮಾಬಾದ್ : ಪಾಕಿಸ್ತಾನ ಸರ್ಕಾರದ ದೌರ್ಜನ್ಯದ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಅಲ್ಲಿನ ಪ್ರಮುಖ ರಾಜಕೀಯ ನಾಯಕರೊಬ್ಬರು ಬಹಿರಂಗವಾಗಿಯೇ ಭಾರತದ ಸಹಾಯವನ್ನು ಯಾಚಿಸಿದ್ದಾರೆ.
ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ನಾಯಕ ಸರ್ದಾರ್ ಅಮಾನ್ ಖಾನ್ ಅವರು ಭಾರತದೊಂದಿಗೆ ನಿಕಟ ಬಾಂಧವ್ಯವನ್ನು ಬಯಸಿದ್ದು, ಇಸ್ಲಾಮಾಬಾದ್ ಸರ್ಕಾರವು ಪಿಒಕೆ ಪ್ರದೇಶದಲ್ಲಿ ಆರ್ಥಿಕ ದಿಗ್ಬಂಧನ ವಿಧಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನಿ ಪಡೆಗಳ ನಿರಂತರ ದೌರ್ಜನ್ಯದಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಭಾರತವು ಮಾನವೀಯ ನೆರವು ನೀಡಬೇಕು ಮತ್ತು ನಿಯಂತ್ರಣ ರೇಖೆಯ (LoC) ಗಡಿಯನ್ನು ಮುಕ್ತಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಮಾನ್ ಖಾನ್ ಅವರ ವಿಡಿಯೋ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರಲ್ಲಿ ಅವರು, “ನಮಗೆ ಭಾರತದ ಸಹಾಯದ ತುರ್ತು ಅಗತ್ಯವಿದೆ. ಇಲ್ಲಿ ದಿನಸಿ ಮತ್ತು ಪಡಿತರ ಸಾಮಗ್ರಿಗಳ ತೀವ್ರ ಕೊರತೆಯಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ. ಪಾಕಿಸ್ತಾನಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ವಿರುದ್ಧ ಅಮಾನವೀಯವಾಗಿ ವರ್ತಿಸುತ್ತಿದೆ.ಆಹಾರ ಮತ್ತು ಔಷಧಿಗಳಿಲ್ಲದೆ ಪಿಒಕೆ ನಿವಾಸಿಗಳು ತೀವ್ರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎಲ್‌ಒಸಿ ಕಡೆಗೆ ಮುನ್ನಡೆಯಲು ಜನತೆಗೆ ಕರೆ
ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಎಎಸಿ ನಾಯಕ, “ನಾವು ನಿಯಂತ್ರಣ ರೇಖೆಯ (LoC) ಕಡೆಗೆ ಮುನ್ನಡೆಯಬೇಕೇ?” ಎಂದು ನೆರೆದಿದ್ದ ಜನಸಮೂಹವನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ “ಖಂಡಿತವಾಗಿಯೂ ಗಡಿಯತ್ತ ಮುನ್ನಡೆಯೋಣ” ಎಂಬ ಒಕ್ಕೊರಲ ಬೆಂಬಲ ವ್ಯಕ್ತವಾಗಿದೆ.
ಜನರ ನ್ಯಾಯಸಮ್ಮತ ಬೇಡಿಕೆಗಳಿಗೆ ಪಾಕಿಸ್ತಾನ ಸರ್ಕಾರವು ಬುಲೆಟ್‌ಗಳ ಮೂಲಕ ಉತ್ತರಿಸಲು ಮುಂದಾದರೆ, ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಮಗೂ ಬೇರೆ ದಾರಿಗಳಿವೆ ಎಂದು ಅವರು ಎಚ್ಚರಿಸಿದ್ದಾರೆ. ಪಾಕಿಸ್ತಾನಿ ಪಡೆಗಳ ಕ್ರೂರ ದಮನಕಾರಿ ನೀತಿಯಿಂದ ತತ್ತರಿಸಿರುವ ಜನರಿಗಾಗಿ ಪೂಂಛ್ ಮತ್ತು ದೋಡಾ ವಲಯಗಳಲ್ಲಿ ಎಲ್‌ಒಸಿ ಗಡಿಯನ್ನು ಮುಕ್ತಗೊಳಿಸಬೇಕು, ಇದರಿಂದಾಗಿ ಪರಿಸ್ಥಿತಿ ಕೈಮೀರಿದರೆ ನಾಗರಿಕರು ಭಾರತಕ್ಕೆ ವಲಸೆ ಹೋಗಲು ಆಯ್ಕೆ ಸಿಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಪಿಒಕೆ ಪಾಕಿಸ್ತಾನದ ಭಾಗವಲ್ಲ’ ಎಂಬ ಘೋಷಣೆ
ಕಳೆದ ತಿಂಗಳಿನಿಂದ ಪಾಕಿಸ್ತಾನ ಆಡಳಿತದ ವಿರುದ್ಧ ಪಿಒಕೆಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗಳು ನಡೆಯುತ್ತಿದ್ದು, ಇದುವರೆಗೆ ಡಜನ್‌ಗಟ್ಟಲೆ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮುಂಚೆ ಕೇವಲ ಸ್ಥಳೀಯ ಸುಧಾರಣೆಗಳು ಮತ್ತು ಸೌಲಭ್ಯಗಳಿಗಾಗಿ ಆರಂಭವಾಗಿದ್ದ ಈ ಆಂದೋಲನ, ಈಗ ಪಾಕಿಸ್ತಾನದ ದೀರ್ಘಕಾಲದ ರಾಜಕೀಯ ನಿಯಂತ್ರಣದಿಂದ ಮುಕ್ತಿ ಪಡೆಯುವ ಸ್ವಾತಂತ್ರ್ಯದ ಹೋರಾಟವಾಗಿ ಮಾರ್ಪಟ್ಟಿದೆ. ಕಳೆದ ವಾರ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಜನಸಾಮಾನ್ಯರು “ಪಿಒಕೆ ಪಾಕಿಸ್ತಾನದ ಭಾಗವಲ್ಲ” ಮತ್ತು “ನಮಗೆ ಸ್ವಾತಂತ್ರ್ಯ ಬೇಕು” ಎಂಬ ಘೋಷಣೆಗಳನ್ನು ಕೂಗುವ ಮೂಲಕ ಇಸ್ಲಾಮಾಬಾದ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇಸ್ಲಾಮಾಬಾದ್‌ನ ದಮನಕಾರಿ ತಂತ್ರ
ರಾಜಕೀಯ ವಿಶ್ಲೇಷಕರ ಪ್ರಕಾರ, ಪಿಒಕೆಯಲ್ಲಿ ಉದ್ಭವಿಸಿರುವ ಪ್ರಸ್ತುತ ರಾಜಕೀಯ ಬಿಕ್ಕಟ್ಟು ಅಲ್ಲಿನ ಸ್ಥಳೀಯ ಜನಸಂಖ್ಯೆ ಮತ್ತು ಇಸ್ಲಾಮಾಬಾದ್‌ಗೆ ಸಂಪೂರ್ಣ ಶರಣಾಗಿರುವ “ಹಲ್ಲಿಲ್ಲದ” ಪ್ರಾದೇಶಿಕ ಆಡಳಿತದ ನಡುವಿನ ತೀವ್ರ ಕಂದಕವನ್ನು ಬಹಿರಂಗಪಡಿಸಿದೆ. ಜೂನ್ 5 ರಂದು ಜೆಎಎಸಿಯನ್ನು ನಿಷೇಧಿತ “ಭಯೋತ್ಪಾದಕ” ಸಂಸ್ಥೆ ಎಂದು ಘೋಷಿಸಿದ ಪಾಕಿಸ್ತಾನ ಸರ್ಕಾರ, ಪ್ರತಿಭಟನೆಯನ್ನು ಹತ್ತಿಕ್ಕಲು ಸೇನಾ ಬಲವನ್ನು ಬಳಸುತ್ತಿದೆ. ದಶಕಗಳಿಂದ ಪಾಕಿಸ್ತಾನದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳೇ ಈ ಆಕ್ರಮಿತ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಾ ಸ್ಥಳೀಯ ಧ್ವನಿಗಳನ್ನು ಹತ್ತಿಕ್ಕುತ್ತಾ ಬಂದಿವೆ. ಪಾಕಿಸ್ತಾನದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ, ಅದೇ ಪಕ್ಷವೇ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಚುನಾವಣೆಗಳಲ್ಲೂ ಗೆಲ್ಲುವ ವ್ಯವಸ್ಥಿತ ತಂತ್ರಗಾರಿಕೆ ನಡೆಯುತ್ತಿದ್ದು, ಈಗ ಅದರ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಮುಂಗಾರು ಆರ್ಭಟ : ಗುಡ್ಡ ಕುಸಿದು ಮನೆಗಳು ಭೂಸಮಾಧಿ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಬಂದ್!



















