ಬೆಂಗಳೂರು : ಕೆ. ಎನ್ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಠಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪದ ನಡುವೆ ಕಾನೂನು ಸಚಿವ ಹೆಚ್. ಕೆ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಕಾನೂನು ಸಚಿವ ಹೆಚ್ .ಕೆ ಪಾಟೀಲ್ ಮಾತನಾಡಿ, ರಾಜಣ್ಣ ವಜಾ ಕಾರಣ ಗೊತ್ತಿಲ್ಲ. ನಮ್ಮದು ಶಿಸ್ತಿನ ಪಕ್ಷ. ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ನಾನು ಆ ವಿಚಾರವಾಗಿ ಯಾವುದೇ ಮಾಧ್ಯಮಗಳಲ್ಲಿ ಮಾತನಾಡುವುದಿಲ್ಲ. ನಾವು ಚರ್ಚೆ ಮಾಡುವುದು ಔಚಿತ್ಯ ಅಲ್ಲ. ಸದನದಲ್ಲಿ ಸಿಎಂ ಅವರು ಘೋಷಣೆ ಮಾಡುತ್ತಾರೆಯೇ ಇಲ್ಲ ಎಂಬುದನ್ನು ನೀವೇ ನೋಡುವಿರಂತೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ರಾಜಣ್ಣ ಪಕ್ಷದಿಂದ ಉಚ್ಚಾಟನೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪಾಟೀಲ್, ಊಹಾಪೋಹಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.



















