ಜಿಬಿಎ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಒಟ್ಟು 43 ವಾರ್ಡ್‌ಗಳಲ್ಲಿ ನವೆಂಬರ್ 1ರಂದು “ವಾರ್ಡ್ ಒನ್” ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ಸಂಬಂಧ ನಡೆದ ವರ್ಚುವಲ್ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೆಸ್ಕಾಂ, ಜಲಮಂಡಳಿ, ಮೆಟ್ರೋ, ಸಾರಿಗೆ ಹಾಗೂ ಸಂಚಾರ ವಿಭಾಗಗಳು ಆಯಾ ನಗರ ಪಾಲಿಕೆಗಳೊಂದಿಗೆ ಜಂಟಿಯಾಗಿ ಕೆಲಸ ಮಾಡಬೇಕಿದೆ. ಪಾಲಿಕೆ ಆಯುಕ್ತರು ಚೆಕ್‌ಲಿಸ್ಟ್‌ಗೆ ಅನುಗುಣವಾಗಿ ಕಾರ್ಯಯೋಜನೆ ರೂಪಿಸಿ, ಸಿಬ್ಬಂದಿಯ ತಂಡಗಳನ್ನು ರಚಿಸಬೇಕೆಂದು ನಿರ್ದೇಶನ ನೀಡಿದ್ದಾರೆ.
ಈ ಅಭಿಯಾನದಲ್ಲಿ ಪ್ರಮುಖ ಜಂಕ್ಷನ್‌ಗಳ ಸ್ವಚ್ಛತೆ, ರಸ್ತೆ ಗುಂಡಿ ಮುಚ್ಚುವುದು, ರಸ್ತೆ ಮೇಲ್ಮೈ ದುರಸ್ತಿ ಹಾಗೂ ಪಾದಚಾರಿ ಕ್ರಾಸಿಂಗ್ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಮಧ್ಯಮಾವಧಿ ಕಾರ್ಯಯೋಜನೆ ರೂಪಿಸಿ ಅನುದಾನ ಮೀಸಲಿಡಲು ಸಚಿವರು ತಿಳಿಸಿದ್ದಾರೆ. ಇದರೊಂದಿಗೆ ರೈಲ್ವೆ ಹಾಗೂ ಕೆ-ರೈಡ್ ಜಾಗಗಳಲ್ಲಿನ ಕಳೆ ಗಿಡ ಮತ್ತು ತ್ಯಾಜ್ಯ ತೆರವುಗೊಳಿಸಲು ಸೂಚಿಸಲಾಗಿದ್ದು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕರನ್ನು ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಲಹೆ ನೀಡಲಾಗಿದೆ.
ಈ ಅಭಿಯಾನಕ್ಕಾಗಿ ಕೇಂದ್ರ ನಗರ ಪಾಲಿಕೆಯ 6, ಉತ್ತರದ 7, ದಕ್ಷಿಣದ 12, ಪಶ್ಚಿಮದ 10 ಹಾಗೂ ಪೂರ್ವ ನಗರ ಪಾಲಿಕೆಯ 8 ವಾರ್ಡ್‌ಗಳು ಸೇರಿದಂತೆ ಒಟ್ಟು 43 ವಾರ್ಡ್‌ಗಳನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್ ಸೇರಿದಂತೆ ಅಪರ ಆಯುಕ್ತರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.



















