ದೆಹಲಿಯಲ್ಲಿ ಎಸ್ಐಆರ್ ಪ್ರತಿಭಟನೆಗೆ ಹೋಗುವಿರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಿಎಂ ಡಿಕೆ ಶಿವಕುಮಾರ್, ನಮ್ಮ ರಾಜ್ಯದಲ್ಲಿ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡುತ್ತೇವೆ. ಪ್ರತಿಯೊಬ್ಬ ಜಿಲ್ಲಾ ಮಂತ್ರಿಯೂ ಆಯಾ ಜಿಲ್ಲೆಗಳಿಗೆ ಹೋಗಿ ಧ್ವಜಾರೋಹಣ ಮಾಡಬೇಕು ಹಾಗೂ ಸರ್ಕಾರದ ವಿಚಾರಗಳನ್ನು ಜನರಿಗೆ ತಿಳಿಸಬೇಕು ಎಂದು ಶಾಸಕರಿಗೆ ಹೇಳಿದ್ದೇನೆ ಎಂದಿದ್ದಾರೆ. ರೈಲಿಗೆ ಸ್ವಲ್ಪ ತೊಂದರೆಯಾಗುತ್ತಿದೆ ಎಂದು ನಮ್ಮ ಅಧ್ಯಕ್ಷರು ತಿಳಿಸಿದ್ದರೂ ಬ್ಲಾಕ್ ಹಾಗೂ ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ದೆಹಲಿಗೆ ಹೋಗುತ್ತಿದ್ದಾರೆ. ಆದರೆ ನಾನು ಮತ್ತು ಮಂತ್ರಿಗಳು ಹೋಗಲು ಆಗುತ್ತಿಲ್ಲ, ಇಲ್ಲೇ ಇರಬೇಕಾಗಿದೆ. ಪರಮೇಶ್ವರ್ ಅವರ ಆರೋಗ್ಯ ಸ್ವಲ್ಪ ಚೆನ್ನಾಗಿಲ್ಲದ ಕಾರಣ ಅವರ ಜಾಗಕ್ಕೆ ಕೃಷ್ಣ ಭೈರೇಗೌಡರು ಹೋಗಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಹಾಲಿನ ದರ ಏರಿಕೆಗೆ ವಿರೋಧ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಾವು 6-7 ರೂಪಾಯಿ ಹೆಚ್ಚಳ ಮಾಡಿದ್ದೇವೆ, ಅದು ಅವರಿಗೆ ಬಿಟ್ಟ ವಿಚಾರ. ಪೆಟ್ರೋಲ್, ಡೀಸೆಲ್ ತರ ಇದು ಜಾಸ್ತಿ ಆಗಿಲ್ಲ. ಬಹಳ ದಿನಗಳಿಂದ ದರ ಏರಿಕೆ ಆಗಿರಲಿಲ್ಲ ಮತ್ತು ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕಡಿಮೆ ಇದೆ. ನಮ್ಮ ಹಾಲು ಹೊರಗಡೆ ತಮಿಳುನಾಡು, ಆಂಧ್ರಕ್ಕೆ ಹೋಗುತ್ತಿತ್ತು. ರೈತರ ಹೋರಾಟ ನಡೆಯುತ್ತಿತ್ತು ಹಾಗೂ ಎಲ್ಲ ಎಂಎಲ್ಎಗಳು ಗಲಾಟೆ ಮಾಡುತ್ತಿದ್ದರು. ಅವರು 12 ರೂಪಾಯಿ ಕೇಳಿದ್ದರು, ಆದರೆ ನಾವು 7 + 1 ರೂಪಾಯಿ ಹೆಚ್ಚಳ ಮಾಡಿದ್ದೇವೆ. 1 ರೂಪಾಯಿ ಬಿಟ್ಟರೆ ಇನ್ನೆಲ್ಲವೂ ರೈತರಿಗೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಪಕ್ಷಗಳ ಆರೋಪದ ವಿಚಾರವಾಗಿ, ಕೇಂದ್ರ ಸರ್ಕಾರ ಏನು ಮಾಡುತ್ತಿದೆಯೋ ಅದನ್ನು ನಾವು ಫಾಲೋ ಮಾಡುತ್ತಿದ್ದೇವೆ ಎಂದಿದ್ದಾರೆ. ರೈತರಿಗೆ ಬೆಳೆ ಪರಿಹಾರ ಕೊಡಲು ಕಂಡಿಷನ್ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿ, ಏನೇನು ಅವಕಾಶ ಇದೆ ಎಂದು ನೋಡಿ ಖಂಡಿತ ಸಹಾಯ ಮಾಡುತ್ತೇವೆ ಎಂದಿದ್ದಾರೆ. ಕಬ್ಬು ಬೆಳೆಗಾರರ ವಿಚಾರವಾಗಿ ಮಾತನಾಡಿ, ನಾವು ಕುಳಿತುಕೊಂಡು ಸೆಟಲ್ಮೆಂಟ್ಗೆ ಬಂದಿದ್ದೆವು. ಆದರೆ ಕೇಂದ್ರದವರು ಏನೋ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಈಗ ಮಧ್ಯದಲ್ಲಿ ಅಸಮಾಧಾನ ಆಗುತ್ತಿರುವ ವರದಿ ಬಂದಿದೆ. ಕಬ್ಬು ಒಣಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ, ಆದ್ದರಿಂದ ಕೇಂದ್ರ ಸರ್ಕಾರ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧರಾಗೋಣ. ನಾವು ರೈತರ ಪರವಾಗಿದ್ದು, ದಯವಿಟ್ಟು ತಾಳ್ಮೆಯಿಂದ ಸಹಕಾರ ಕೊಡಬೇಕು. 10 ವರ್ಷದಿಂದ ಸಕ್ಕರೆ ಬೆಲೆ ಜಾಸ್ತಿ ಆಗದಿದ್ದರೆ ಕಾರ್ಖಾನೆಗಳು ಎಲ್ಲಿಂದ ಕೊಡಲು ಸಾಧ್ಯ? ಸಕ್ಕರೆ ಬೆಲೆ ಫಿಕ್ಸ್ ಮಾಡಬೇಕು, ನಾವು ರಿಕ್ವೆಸ್ಟ್ ಮಾಡುತ್ತೇವೆ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಕೊಟ್ಟಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದೆ ತಲೆಯಾಡಿಸಿ ಹೊರಟಿದ್ದಾರೆ.


















