ಸ್ವದೇಶಿ ಜಿಪಿಎಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮುಂದಿನ ಪೀಳಿಗೆಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶ್ರೀಹರಿಕೋಟದಿಂದ ಶುಕ್ರವಾರ ರಾತ್ರಿ 11:51ಕ್ಕೆ ಇಸ್ರೋದ ‘ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (GSLV-F18) ನಭಕ್ಕೆ ಚಿಮ್ಮಿದೆ. ಈ ರಾಕೆಟ್ ‘NVS-03’ ಎಂಬ ನಿರ್ಣಾಯಕ ನ್ಯಾವಿಗೇಷನ್ ಉಪಗ್ರಹವನ್ನು ಹೊತ್ತೊಯ್ದಿದ್ದು, ಇದು ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆಯಾದ ‘NavIC’ ಅನ್ನು ಪುನಃಸ್ಥಾಪಿಸಲು ಮತ್ತು ಬಲಪಡಿಸಲು ನೆರವಾಗಲಿದೆ.
ಈ ಕಾರ್ಯಾಚರಣೆಯು ಭಾರತದ ಕಾರ್ಯತಂತ್ರದ ಮೂಲಸೌಕರ್ಯದಲ್ಲಿನ ನಿರ್ಣಾಯಕ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಇಟ್ಟ ದೊಡ್ಡ ಹೆಜ್ಜೆಯಾಗಿದೆ. ಉಪಗ್ರಹವನ್ನು ನಿಗದಿತ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಅತ್ಯಂತ ನಿಖರವಾಗಿ ನೆಲೆಗೊಳಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಘೋಷಿಸಿದ್ದಾರೆ. ಸ್ವದೇಶಿ ಹಾಗೂ ಅತ್ಯಂತ ನಿಖರವಾದ ಸಮಯ ಮತ್ತು ಸಂಚರಣೆ ಸೇವೆಗಳ ಪ್ರಾಮುಖ್ಯತೆಯನ್ನು ವಿವರಿಸಿರುವ ಅವರು, ಭಾರತವು ಈಗ ʼಒಂದು ರಾಷ್ಟ್ರ, ಒಂದು ಸಮಯʼ ಎಂಬ ಗುರಿಯತ್ತ ಇನ್ನಷ್ಟು ಹತ್ತಿರವಾಗಬಲ್ಲದು ಎಂದು ತಿಳಿಸಿದ್ದಾರೆ. ಉಪಗ್ರಹದ ಯಶಸ್ವಿ ಉಡಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.



















