ಬೆಂಗಳೂರು : ಯುವ ಕ್ರಿಕೆಟಿಗರು ಐಪಿಎಲ್ ನೀಡುವ ದಿಢೀರ್ ಜನಪ್ರಿಯತೆ ಹಾಗೂ ಹಣದ ಹಿಂದೆ ಹೋಗದೆ, ದೀರ್ಘಕಾಲದವರೆಗೆ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಶ್ರೇಷ್ಠತೆಯನ್ನು ಸಾಧಿಸುವತ್ತ ಗಮನ ಹರಿಸಬೇಕು ಎಂದು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಲಹೆ ನೀಡಿದ್ದಾರೆ.
ಆರ್‌ಸಿಬಿ ಇನ್ನೋವೇಶನ್ ಲ್ಯಾಬ್ ಆಯೋಜಿಸಿದ್ದ ‘ಇಂಡಿಯನ್ ಸ್ಪೋರ್ಟ್ಸ್ ಶೃಂಗಸಭೆ’ಯ 3ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಪ್ರಾಂಚೈಸಿ ಕ್ರಿಕೆಟ್‌ನಿಂದಾಗಿ ಯುವ ಆಟಗಾರರ ಮನಸ್ಥಿತಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಹಣವೇ ಎಲ್ಲವೂ ಅಲ್ಲ, ಸಾಧಿಸುವ ಹಸಿವಿರಬೇಕು
ಇತ್ತೀಚಿನ ದಿನಗಳಲ್ಲಿ ‘ಡ್ರೈವ್’ (ಸಾಧಿಸುವ ಛಲ) ಎನ್ನುವುದನ್ನು ಅನೇಕರು ಹಣಕ್ಕೆ ಸಮೀಕರಿಸುತ್ತಿದ್ದಾರೆ ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದರು. ಐಪಿಎಲ್‌ನಂತಹ ಟೂರ್ನಿಗಳಲ್ಲಿ 20 ಎಸೆತಗಳಲ್ಲಿ 40-50 ರನ್ ಬಾರಿಸಿದ ತಕ್ಷಣವೇ ಅಪಾರ ಜನಪ್ರಿಯತೆ ಹಾಗೂ ಕೋಟ್ಯಂತರ ರೂಪಾಯಿ ಹಣ ಒಲಿಯುತ್ತದೆ. ಇದು ಆಟಗಾರರನ್ನು ಒಂದು ‘ಕಂಫರ್ಟ್ ಝೋನ್’ಗೆ (ಆರಾಮದಾಯಕ ಸ್ಥಿತಿಗೆ) ತಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು. ಯುವ ಆಟಗಾರರು ಕೇವಲ ಚುಟುಕು ಕ್ರಿಕೆಟ್‌ನ ಯಶಸ್ಸಿಗೆ ತೃಪ್ತಿಪಡದೆ, ಎಲ್ಲಾ ಮಾದರಿಗಳಲ್ಲೂ ಸುದೀರ್ಘ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಕಡೆಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
15-20 ವರ್ಷಗಳ ಗುರಿ ಇಟ್ಟುಕೊಳ್ಳಿ
“ನಾನು ಹೆಚ್ಚು ಕಾಲ ಒತ್ತಡವನ್ನು ನಿಭಾಯಿಸುವ ಅಗತ್ಯವಿಲ್ಲ, ಮೈದಾನಕ್ಕಿಳಿದು ಚೆಂಡನ್ನು ಬಲವಾಗಿ ಬಾರಿಸಿದರಷ್ಟೇ ಸಾಕು ಎಂಬ ಮನಸ್ಥಿತಿಯನ್ನು ಯುವ ಆಟಗಾರರು ಬೆಳೆಸಿಕೊಳ್ಳಬಹುದು. ಆದರೆ, ಇದರ ಬದಲಾಗಿ ‘ನಾನು 15-20 ವರ್ಷಗಳ ಕಾಲ ಆಡಬೇಕು, ಕ್ರಿಕೆಟ್ ಜಗತ್ತಿನಲ್ಲಿ ಹಾಗೂ ನನ್ನ ಆದರ್ಶ ಆಟಗಾರರಿಂದ ಗೌರವ ಗಳಿಸಬೇಕು’ ಎಂಬ ದೃಢವಾದ ಗುರಿಯನ್ನು ಹೊಂದಬೇಕು” ಎಂದು ಕೊಹ್ಲಿ ಸಲಹೆ ನೀಡಿದರು. ಮುಂದಿನ 10-15 ವರ್ಷಗಳ ಕಾಲ ಕಠಿಣ ಪರಿಶ್ರಮ ಹಾಕಲು ಸಿದ್ಧರಿರಬೇಕು. ಇದು ಕಷ್ಟಕರವಾದರೂ ಅದನ್ನು ಎದುರಿಸುವ ಛಲ ಇರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಪರಿಸ್ಥಿತಿಗೆ ತಕ್ಕಂತೆ ಆಡುವ ಸಾಮರ್ಥ್ಯ ಮುಖ್ಯ
ಪ್ರಸ್ತುತ ಪೀಳಿಗೆಯ ಬ್ಯಾಟರ್‌ಗಳ ಪವರ್-ಹಿಟ್ಟಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದ ಕೊಹ್ಲಿ, ಈ ವಿಚಾರದಲ್ಲಿ ಅವರು ತಮ್ಮ ಕಾಲದ ಆಟಗಾರರಿಗಿಂತ ಸಾಕಷ್ಟು ಮುಂದಿದ್ದಾರೆ ಎಂದು ಒಪ್ಪಿಕೊಂಡರು. ಆದರೆ, ಐಪಿಎಲ್‌ನಂತಹ ಟೂರ್ನಿಗಳಲ್ಲೂ ಒತ್ತಡದ ಸಂದರ್ಭಗಳು ಹಾಗೂ ಕಠಿಣ ಪಿಚ್‌ಗಳು ಬ್ಯಾಟರ್‌ಗಳ ನೈಜ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತವೆ ಎಂದರು. “ಒಂದು ವೇಳೆ ಪಿಚ್ ಬೌಂಡರಿ ಬಾರಿಸಲು ಸಹಕರಿಸುತ್ತಿಲ್ಲ ಎಂದಾದರೆ, ತಂಡವನ್ನು ಬೇರೆ ರೀತಿಯಲ್ಲಿ ಗೆಲುವಿನ ದಡ ಸೇರಿಸುವ ಸಾಮರ್ಥ್ಯ ಬ್ಯಾಟರ್‌ಗೆ ಇರಬೇಕು. ಪರಿಸ್ಥಿತಿಗೆ ತಕ್ಕಂತೆ ಏಳೆಂಟು ವಿಭಿನ್ನ ಶೈಲಿಗಳಲ್ಲಿ ಬ್ಯಾಟ್ ಬೀಸುವ ಕಲೆ ಕರಗತವಾಗಿರಬೇಕು” ಎಂದು ಕೊಹ್ಲಿ ವಿವರಿಸಿದರು.
ತಂತ್ರಗಾರಿಕೆ ಮತ್ತು ಫಿಟ್‌ನೆಸ್ ಅತ್ಯಗತ್ಯ
ಪಂದ್ಯದ ವಿವಿಧ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಉತ್ತಮ ತಂತ್ರಗಾರಿಕೆ, ದೈಹಿಕ ಫಿಟ್‌ನೆಸ್ ಹಾಗೂ ಕಠಿಣ ಪೂರ್ವಸಿದ್ಧತೆ ಅತ್ಯಗತ್ಯ ಎಂದು ವಿರಾಟ್ ಕೊಹ್ಲಿ ಒತ್ತಿ ಹೇಳಿದರು. ಪಂದ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಅದಕ್ಕೆ ತಕ್ಕಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗುವುದು ಬಹಳ ಮುಖ್ಯ. ಇದು ನಮ್ಮೊಳಗಿನ ನೈಜ ಸಾಮರ್ಥ್ಯವನ್ನು ಹೊರತರುವ ಆಯ್ಕೆಗಳಾಗಿವೆ ಎಂದು ಅವರು ತಿಳಿಸಿದರು. ಈ ಮೂಲಕ ಯುವ ಪೀಳಿಗೆಗೆ ಶ್ರೇಷ್ಠತೆಯತ್ತ ಹೆಜ್ಜೆ ಹಾಕಲು ದಿಟ್ಟ ಮಾರ್ಗದರ್ಶನ ನೀಡಿದರು.
ಇದನ್ನೂ ಓದಿ : ನಿನ್ನ ಚೀಟಿ ಈಗ ಎಲ್ಲಿದೆ? ಲೈವ್ ಕಾಮೆಂಟರಿಯಲ್ಲಿLSG ಬೌಲರ್ ಆಕಾಶ್ ಸಿಂಗ್‌ಗೆ ಗವಾಸ್ಕರ್ ತರಾಟೆ


















