ಬೆಳಗಾವಿ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡುಗಿದ್ದಾರೆ. ಅವರು ತಮ್ಮ ಇತಿಮಿತಿಯಲ್ಲಿ ಇದ್ದರೆ ಅವರಿಗೆ ಒಳ್ಳೆಯದು. ಇಲ್ಲದಿದ್ದರೆ, ಸದನದಲ್ಲಿ ಎಲ್ಲವನ್ನೂ ಬಿಚ್ಚಿಡ ಬೇಕಾಗುತ್ತದೆ ಎಂದು ಡಿಸಿಎಂ ಎಚ್ಚರಿಕೆ ನೀಡಿದ್ದಾರೆ.
“ಕಲೆಕ್ಷನ್ ಕಿಂಗ್ ಎಂದು ಏನಾದರೂ ಇದ್ದರೆ ಅದು ವಿಜಯೇಂದ್ರ. ಅವರ ತಂದೆ ಯಡಿಯೂರಪ್ಪ ಹೆಸರು ಇಳಿಯಲು ವಿಜಯೇಂದ್ರ ಕಾರಣ. ಇದನ್ನ ಮರೆಯಬಾರದು. ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ (ಡಿ.18) ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ಅನ್ನು ತೃಪ್ತಿಪಡಿಸಲಾಗುತ್ತಿದೆ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವ ಆರೋಪವನ್ನು ವಿಜಯೇಂದ್ರ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಯಾವ ಖಜಾನೆ ಖಾಲಿಯಾಗಿದೆ? ಕಲೆಕ್ಷನ್, ಅವರ ಅಕೌಂಟ್ ಗಳು, ವಹಿವಾಟುಗಳನ್ನು ಬಿಚ್ಚಿಡಬೇಕೇ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.
ಅವರು ವಿಧಾನಸಭೆಯಲ್ಲಿ ಮಾತನಾಡಿದರೆ ಏನೇನು ಮಾತನಾಡಬೇಕು ಎಂದು ನನಗೂ ಗೊತ್ತಿದೆ. ಪಕ್ಷದ ಅಧ್ಯಕ್ಷರಾಗಿ ಇತಿಮಿತಿಯಿಂದ ಮಾತನಾಡಲಿ. ಮೊದಲು ವಿಧಾನಸಭೆಗೆ ಬಂದು ಮಾತನಾಡಲು ಹೇಳಿ. ತಪ್ಪಿಸಿಕೊಂಡು ಹೋಗಿ ಎಲ್ಲೋ ಇರುವುದಲ್ಲ. ಇಲ್ಲಿ ಬಂದು ಮಾತನಾಡಲಿ. ವಿಜಯೇಂದ್ರ ಅವರಿಗೆ ಅನುಭವವಿಲ್ಲ. ಯಾವ ಖಜಾನೆ ಖಾಲಿಯಾಗಿದೆ ಎಂದು ಡಿಸಿಎಂ ಕುಟುಕಿದ್ದಾರೆ.
ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಹೊರೆಯಾಗುತ್ತಿದ್ದರು ನಮ್ಮ ಸರ್ಕಾರ ರೈತರ ಪರವಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ. ಕಬ್ಬು, ಮೆಕ್ಕೆಜೋಳದ ಬೆಲೆಗಳ ಬಗ್ಗೆ ಇದ್ದ ಸಮಸ್ಯೆಗಳನ್ನು ನಾವು ಬಗೆಹರಿಸಿದ್ದೇವೆ. ಸರ್ಕಾರ ರೈತಪರವಾಗಿ ತೆಗೆದುಕೊಂಡಿರುವ ನಿರ್ಧಾರವನ್ನು ರೈತರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ಡಿಕೆ ಶಿವಕುಮಾರ್, ರೈತಾಪಿ ವರ್ಗಕ್ಕೆ ಮನವಿಯನ್ನು ಮಾಡಿದ್ದಾರೆ.
ಮುಖ್ಯಮಂತ್ರಿಯವರು ಹಾಗೂ ಕಂದಾಯ ಸಚಿವರು ಉತ್ತರ ಕರ್ನಾಟಕದ ವಿಚಾರವಾಗಿ ನಡೆದಿರುವ ಚರ್ಚೆಗಳಿಗೆ ಉತ್ತರ ನೀಡುತ್ತಾರೆ. ಈ ಭಾಗದ ನೀರಾವರಿ ಯೋಜನೆಗಳಾದ ಯುಕೆಪಿ, ಮಹದಾಯಿ ವಿಚಾರಗಳ ಬಗ್ಗೆ ಅವಕಾಶ ಸಿಕ್ಕರೆ ಉತ್ತರಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಪತ್ನಿ ಕೊಲೆಗೆ ಪತಿಯಿಂದಲೇ ಸುಫಾರಿ | ಮೂವರು ಆರೋಪಿಗಳ ಬಂಧನ



















