ವಾಷಿಂಗ್ಟನ್ : ಅಮೆರಿಕ ವಾಯುಸೇನೆಯ ಶಕ್ತಿಶಾಲಿ B-52 ಬಾಂಬರ್ (B-52 Bomber) ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 8 ಮಂದಿ ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ವಿಮಾನ ಅಪಘಾತವು ಲಾಸ್ ಏಂಜಲೀಸ್‌ನ ಉತ್ತರಕ್ಕೆ ಸುಮಾರು 95 ಕಿಮೀ ದೂರದಲ್ಲಿ ಸಂಭವಿಸಿದೆ. ವಿಮಾನ ಪತನಗೊಂಡ ಬೆನ್ನಲ್ಲೇ ಸ್ಥಳದಲ್ಲಿ ಭಾರೀ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುನೆಲೆಯಲ್ಲಿ ಮಧ್ಯಾಹ್ನ ಟೇಕ್-ಆಫ್ ಆದ ಸ್ವಲ್ಪ ಸಮಯದಲ್ಲೇ ವಿಮಾನ ದುರಂತಕ್ಕೀಡಾಗಿದೆ.
ನಿತ್ಯ ಪರೀಕ್ಷಾ ಕಾರ್ಯಾಚರಣೆಗಾಗಿ 8 ಜನರನ್ನ ಹೊತ್ತೊಯ್ಯುತ್ತಿದ್ದ ವಾಯುಪಡೆಯ ʻಸ್ಟ್ರಾಟೊಫೋರ್ಟ್ರೆಸ್ʼ ಹೆಸರಿನ ಬಿ-52 ಬಾಂಬರ್, ಸೋಮವಾರ ಬೆಳಗ್ಗೆ 11:20 ರ ಸುಮಾರಿಗೆ ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಬದುಕುಳಿಯುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಎಡ್ವರ್ಡ್ಸ್ ನೆಲೆಯ ವಾಯುಪಡೆ ಹೇಳಿದೆ.
ಘಟನೆ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತುರ್ತು ಕಾರ್ಯಾಚರಣೆ ಕೈಗೊಂಡಿದ್ದಾರೆ. ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನ ಬಂದ್ ಮಾಡಲಾಗಿದೆ. ಅಲ್ಲದೇ ಈ ಮಾರ್ಗದಲ್ಲಿ ಬರುವ ಎಲ್ಲಾ ವಿಮಾನಗಳನ್ನ ಬೇರೆಡೆಗೆ ತಿರುಗಿಸಲಾಗಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೆಗಾ ರೇಡ್!



















