ಬೆಂಗಳೂರು : ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಬೃಹತ್ ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮೂವರು ಅಧಿಕಾರಿಗಳ ಮನೆ, ಕಚೇರಿ ಹಾಗೂ ಫಾರ್ಮ್ ಹೌಸ್‌ಗಳ ಮೇಲೆ 12 ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳು ಹಾಗೂ ಆಸ್ತಿ–ಪಾಸ್ತಿ ಸಂಬಂಧಿತ ಮಾಹಿತಿಗಳನ್ನು ಪರಿಶೀಲಿಸಲಾಗಿದೆ.
ದಾವಣಗೆರೆಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣ ನಾಯ್ಕ್, NWKRTC ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ಹಾಗೂ ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರ ಮನೆ, ಕಚೇರಿ ಮತ್ತು ಫಾರ್ಮ್ ಹೌಸ್‌ಗಳ ಮೇಲೆ ದಾಳಿ ನಡೆದಿದೆ. ಸಿದ್ದೇಶ್ವರ ಹೆಬ್ಬಾಳ ಅವರ ಮನೆಯಲ್ಲಿ ಅಪಾರ ಚಿನ್ನಾಭರಣ ಹಾಗೂ ನಗದು ಪತ್ತೆಯಾದ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ, ಹುಬ್ಬಳ್ಳಿ ಮತ್ತು ದಾವಣಗೆರೆ ಸೇರಿ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಕಾರ್ಯಾಚರಣೆ ನಡೆದಿದ್ದು, ಅಧಿಕಾರಿಗಳ ಆಸ್ತಿ ಮತ್ತು ಹಣಕಾಸು ವ್ಯವಹಾರಗಳ ಕುರಿತು ಲೋಕಾಯುಕ್ತ ತಂಡಗಳು ತೀವ್ರ ಪರಿಶೀಲನೆ ನಡೆಸುತ್ತಿವೆ. ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಲಬುರಗಿಯಲ್ಲೂ ಲೋಕಾಯುಕ್ತ ಬಿರುಸಿನ ಕಾರ್ಯಾಚರಣೆ
ಇದೇ ವೇಳೆ ಕಲಬುರಗಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ. ನಿವೃತ್ತ ಪಂಚಾಯತ್ ರಾಜ್ ಇಂಜಿನಿಯರ್ ಹಾಗೂ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಾಣಿಕ್ ಕನಕಟ್ಟಿ ಅವರ ಮನೆ ಸೇರಿ ಒಟ್ಟು ಐದು ಸ್ಥಳಗಳಲ್ಲಿ ದಾಳಿ ನಡೆದಿದೆ. ನಗರದ ಗೋದುತಾಯಿ ನಗರದಲ್ಲಿನ ನಿವಾಸ, ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್‌ನ ಎರಡು ಕಾಂಪ್ಲೆಕ್ಸ್‌ಗಳು ಹಾಗೂ ತೋಟದ ಮನೆಯ ಮೇಲೂ ಪರಿಶೀಲನೆ ನಡೆದಿದೆ.
ಕಲಬುರಗಿ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಅಧಿಕಾರಿಗಳ ಸಂಪತ್ತು ಮತ್ತು ಆದಾಯ ಮೂಲಗಳ ಬಗ್ಗೆ ತನಿಖೆ ಮುಂದುವರಿದಿದೆ.
ಚಿಕ್ಕಮಗಳೂರಲ್ಲಿಯೂ ಲೋಕಾಯುಕ್ತ ದಾಳಿ
ಚಿಕ್ಕಮಗಳೂರಲ್ಲಿಯೂ ಲೋಕಾಯುಕ್ತ ದಾಳಿ ನಡೆದಿದ್ದು, ACF ಮೋಹನ್ ಅವರ ಮನೆ ಮತ್ತು ನಗರದ ಕಲ್ಯಾಣನಗರದಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ DYSP ತಿರುಮಲೇಶ್ ನೇತೃತ್ವದ ತಂಡ ಈ ದಾಳಿಯನ್ನು ನಡೆಸಿದ್ದು, ನಿರಂತರವಾಗಿ ಬಂದಿದ್ದ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ – ನಿವೃತ್ತ ಉಪನ್ಯಾಸಕ ಸ್ಥಳದಲ್ಲೇ ಸಾವು.. ಐವರಿಗೆ ಗಾಯ



















