ನವದೆಹಲಿ: ಭಾರತ ಮತ್ತು ಚೀನಾ ಗಡಿಭಾಗವಾದ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಎರಡೂ ದೇಶಗಳ ಸೈನಿಕರ ನಡುವೆ ಮುಖಾಮುಖಿ ಸಂಘರ್ಷಗಳು ಇಂದಿಗೂ ಮುಂದುವರಿದಿವೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜಿತ್ ಕಪೂರ್ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ಅರುಣಾಚಲ ಗಡಿಯಲ್ಲಿ ಉದ್ವಿಗ್ನತೆ ಮುಂದುವರಿದಿರುವುದನ್ನು ಉನ್ನತ ಭದ್ರತಾ ಅಧಿಕಾರಿಯೊಬ್ಬರು ಅಧಿಕೃತವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದ್ದು, ಈ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಐಟಿಬಿಪಿ ಸಿಬ್ಬಂದಿಯ ವಾರ್ಷಿಕ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಡಿಜಿ ಶತ್ರುಜಿತ್ ಕಪೂರ್, ಜುಲೈ ತಿಂಗಳಿನಿಂದ ಅರುಣಾಚಲ ಪ್ರದೇಶದ ಟಾಕ್ಸಿಂಗ್ ಪ್ರದೇಶ ಸೇರಿದಂತೆ ಹಲವು ಗಡಿ ಭಾಗಗಳಲ್ಲಿ ಚೀನಾ ಸೇನೆಯು ಭಾರತೀಯ ಸೈನಿಕರ ಗಸ್ತು ತಿರುಗುವಿಕೆಯನ್ನು ತಡೆಯಲು ಯತ್ನಿಸಿದಾಗ ಈ ಮುಖಾಮುಖಿ ಘಟನೆಗಳು ಆರಂಭಗೊಂಡವು ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿಯೂ ಹಲವು ಸ್ಥಳಗಳಲ್ಲಿ ಸೇನೆಗಳ ನಡುವೆ ಘರ್ಷಣೆಯ ವಾತಾವರಣ ನಿರ್ಮಾಣವಾಗಿದ್ದು, ಅದು ಈಗಲೂ ಮುಂದುವರಿದಿದೆ. ಈ ಸವಾಲಿನ ಸನ್ನಿವೇಶದಲ್ಲಿ ಎತ್ತರದ ಪ್ರದೇಶಗಳಲ್ಲಿ ಸಮರ ಕಲೆಯ ತರಬೇತಿ ಪಡೆದ ಐಟಿಬಿಪಿಯ ನೂತನ ‘ಶೌರ್ಯ ಕಮಾಂಡೋಗಳು’ ಅತ್ಯಂತ ಶ್ರೇಷ್ಠ ಮಟ್ಟದ ಕ್ಷಮತೆ ಪ್ರದರ್ಶಿಸಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಚೀನಾ ಗಡಿಯು ಅತ್ಯಂತ ಕಠಿಣವಾದ ರಕ್ಷಣಾ ವಲಯವಾಗಿದ್ದು, ಗಾಲ್ವಾನ್ ಮಾದರಿಯ ಸಂಘರ್ಷಗಳನ್ನು ಎದುರಿಸಲು ಐಟಿಬಿಪಿ ಪ್ರತ್ಯೇಕ ಸಮರ ತರಬೇತಿ ಕಾರ್ಯಕ್ರಮ, ಡ್ರೋನ್ ಪ್ಲಟೂನ್ಗಳ ರಚನೆ ಹಾಗೂ ಭೂಗತ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳುತ್ತಿದೆ ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ
ಐಟಿಬಿಪಿ ಮುಖ್ಯಸ್ಥರ ಈ ಸ್ಫೋಟಕ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ಗಡಿಯಲ್ಲಿ ಇಷ್ಟೆಲ್ಲಾ ಸನ್ನಿವೇಶಗಳಿದ್ದರೂ ಪ್ರಧಾನಿ ಮೋದಿಯವರ ಮೌನ ಆಘಾತಕಾರಿಯಾಗಿದೆ ಎಂದು ಆರೋಪಿಸಿದ್ದಾರೆ. “ಸ್ವಯಂ ಘೋಷಿತ ವಿಶ್ವಗುರು ಚೀನಾಗೆ ಸತತವಾಗಿ ರಿಯಾಯಿತಿಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಐಟಿಬಿಪಿ ಯೋಧರು ಗಡಿಯಲ್ಲಿ ಹೋರಾಡುತ್ತಿದ್ದಾರೆ. ಆದರೆ ದೇಶದ ಆಡಳಿತಗಾರರು ಈ ಬಗ್ಗೆ ಮೌನ ತಳೆದಿದ್ದಾರೆ” ಎಂದು ಅವರು ಎಕ್ಸ್ (X) ನಲ್ಲಿ ಟೀಕಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ನಡೆದ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆಗಳ ಫಲಿತಾಂಶವೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಲಡಾಖ್ನಂತೆ ಅರುಣಾಚಲದಲ್ಲೂ ಭಾರತೀಯ ಪಡೆಗಳ ಗಸ್ತು ಪಾಯಿಂಟ್ಗಳ ಮೇಲಿನ ಹಿಡಿತ ತಪ್ಪುತ್ತಿದೆಯೇ ಹಾಗೂ ಚೀನಾ ನಿರ್ಮಿಸುತ್ತಿರುವ ಬೃಹತ್ ಆಣೆಕಟ್ಟಿನಿಂದ ದೇಶದ ಜಲ ಭದ್ರತೆಗೆ ಧಕ್ಕೆಯಾಗುತ್ತಿದೆಯೇ ಎಂದು ಸರ್ಕಾರದ ಸ್ಪಷ್ಟನೆ ಕೋರಿದೆ.
ಸ್ಥಳೀಯರ ಕಳವಳ, ಸರ್ಕಾರದ ಸ್ಪಷ್ಟನೆ
ಇದಕ್ಕೂ ಮೊದಲು ಅರುಣಾಚಲ ಪ್ರದೇಶದ ಪ್ರಾದೇಶಿಕ ಪಕ್ಷವಾದ ‘ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ’ (PPA) ನಾಯಕರು, ಚೀನಾ ಸೇನೆಯು ಮೇಲ್ ಸುಬನ್ಸಿರಿ ಜಿಲ್ಲೆಯ ಹಲವು ಪ್ರಮುಖ ಗಸ್ತು ಪಾಯಿಂಟ್ಗಳಿಗೆ ಭಾರತೀಯ ಪಡೆಗಳ ಪ್ರವೇಶವನ್ನು ತಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೆ, ಈ ಪ್ರತಿಪಾದನೆಗಳನ್ನು ತಳ್ಳಿಹಾಕಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು, ಅರುಣಾಚಲ ಪ್ರದೇಶದಲ್ಲಿ ಯಾವುದೇ ಭಾರತೀಯ ಭೂಭಾಗ ಚೀನಾದ ವಶವಾಗಿಲ್ಲ. ಗಡಿ ಪ್ರದೇಶದ ಜಾನುವಾರ ಮೇಯಿಸುವ ಜಾಗಗಳ ವಿಚಾರದಲ್ಲಿ ಸ್ಥಳೀಯರಿಗೆ ಇರುವ ಕಳವಳವನ್ನು ಸರ್ಕಾರ ಗಮನಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದರು. ಆದಾಗ್ಯೂ, ಐಟಿಬಿಪಿ ಡಿಜಿ ಅವರ ಹೇಳಿಕೆಯು ಗಡಿಯಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ದೃಢಪಡಿಸಿದೆ.



















