ದುಬೈ: ಇತ್ತೀಚೆಗೆ ಫ್ಲೈದುಬೈ (flydubai) ವಿಮಾನದಲ್ಲಿ ನಡೆದ ಭೀಕರ ದಾಳಿ ಮತ್ತು ವಿಮಾನ ಅಪಹರಣ ಯತ್ನದ ವೇಳೆ ಅದಮ್ಯ ಸಾಹಸ ಹಾಗೂ ಸಮಯಪ್ರಜ್ಞೆ ಮೆರೆದು ನೂರಾರು ಮಂದಿಯ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಮತ್ತು ಅವರ ಸಿಬ್ಬಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸರ್ಕಾರವು ಅತ್ಯುನ್ನತ ಗೌರವ ಸಮರ್ಪಿಸಿದೆ. ಸೆಪ್ಟೆಂಬರ್ 30ರಂದು ವಿಮಾನ ಹಾರಾಟದಲ್ಲಿದ್ದಾಗ ಕಾಕ್ಪಿಟ್ನಲ್ಲಿ ನಡೆದ ಅನಿರೀಕ್ಷಿತ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದರೂ, ಧೈರ್ಯದಿಂದ ಕಾಕ್ಪಿಟ್ ಬಾಗಿಲನ್ನು ತೆರೆಯುವಲ್ಲಿ ಕ್ಯಾಪ್ಟನ್ ಸ್ಮಿತ್ ಯಶಸ್ವಿಯಾಗಿದ್ದರು. ಇದರಿಂದಾಗಿ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ತಕ್ಷಣವೇ ಒಳಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಗಿ, ಸಂಭವಿಸಬಹುದಾಗಿದ್ದ ಭಾರಿ ವಿಮಾನ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿತ್ತು.
‘ಆರ್ಡರ್ ಆಫ್ ಜಾಯೆದ್ II’ ಪುರಸ್ಕಾರ
ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರ ಪ್ರಾಣವನ್ನು ರಕ್ಷಿಸಿ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲು ನೆರವಾದ ಈ ಅಸಾಧಾರಣ ಸಾಹಸಕ್ಕೆ ಗೌರವವಾಗಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಹಾಗೂ ವಿಮಾನ ಸಿಬ್ಬಂದಿಗೆ ಪ್ರಥಮ ದರ್ಜೆಯ ‘ಆರ್ಡರ್ ಆಫ್ ಜಾಯೆದ್ II’ (First Class Order of Zayed II) ಪ್ರಶಸ್ತಿಯನ್ನು ಪ್ರಕಟಿಸಿದ್ದರು. ಅದರಂತೆ ಬುಧವಾರ ದುಬೈನ ಯುವರಾಜ, ಉಪ ಪ್ರಧಾನಿ ಹಾಗೂ ರಕ್ಷಣಾ ಸಚಿವರಾದ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ದುಬೈ ಆಡಳಿತಗಾರರ ಸಮ್ಮುಖದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಯುಎಇ ನಾಯಕತ್ವವು ಸಿಬ್ಬಂದಿಯ ವೃತ್ತಿಪರತೆ ಹಾಗೂ ಮನುಷ್ಯತ್ವದ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ.
ಯೋಗಕ್ಷೇಮ ವಿಚಾರಿಸಿದ್ದ ದುಬೈ ಯುವರಾಜ
ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಅಕ್ಟೋಬರ್ 3ರಂದೇ ದುಬೈ ಯುವರಾಜ ಶೇಖ್ ಹಮ್ದಾನ್ ಖುದ್ದಾಗಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು. “ಸ್ಮಿತ್ ಅವರು ತೋರಿದ ಧೈರ್ಯ, ಜವಾಬ್ದಾರಿ ಮತ್ತು ಮಾನವ ಜೀವಗಳ ಮೇಲಿನ ಕಾಳಜಿ ಶ್ರೇಷ್ಠ ಮಟ್ಟದ್ದು. ನಮ್ಮ ದೇಶ ಮತ್ತು ನಾಯಕತ್ವವು ಅವರಿಗೆ ಸಂಪೂರ್ಣ ಅಭಿನಂದನೆಗಳನ್ನು ಸಲ್ಲಿಸುತ್ತದೆ,” ಎಂದು ಶೇಖ್ ಹಮ್ದಾನ್ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದರು. ಯುಎಇ ದೇಶವು ಕರುಣೆ ಮತ್ತು ಶಾಂತಿಯ ತಾಣವಾಗಿದ್ದು, ಇಂತಹ ವೀರರು ನಮ್ಮ ರಾಷ್ಟ್ರದ ಹೆಮ್ಮೆಯ ಭಾಗವಾಗಿದ್ದಾರೆ ಎಂದು ಅವರು ಬಣ್ಣಿಸಿದ್ದರು.
ಭಾರತೀಯ ವೀರ ಪೈಲಟ್ಗೆ ಜಾಗತಿಕ ನಾಯಕರ ಜಯಘೋಷ
ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಈ ಸಾಹಸಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮಿತ್ ಅವರನ್ನು ‘ನಿಜವಾದ ನಾಯಕ’ (ಹೀರೋ) ಎಂದು ಕರೆದಿದ್ದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಂಭೀರ ಗಾಯಗಳ ನಡುವೆಯೂ ಬಾಗಿಲು ತೆರೆದು ಪ್ರಯಾಣಿಕರ ಜೀವ ಉಳಿಸಿದ ಪೈಲಟ್ನ ಸಾಹಸವನ್ನು ಕೊಂಡಾಡಿದ್ದರು. ಅಷ್ಟೇ ಅಲ್ಲದೆ, ಕ್ಯಾಪ್ಟನ್ ಸ್ಮಿತ್ ಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಂಡ ತಕ್ಷಣ ಅವರಿಗೆ ನಾಗರಿಕ ಸಾಹಸ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಇಸ್ರೇಲ್ ಸರ್ಕಾರವೂ ಪ್ರಕಟಿಸಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಭರ್ಜರಿ ಜಯ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ



















