ಬೆಂಗಳೂರು: ಪ್ರತಿ ತಿಂಗಳ ಆರಂಭದಲ್ಲಿ ದೇಶದಲ್ಲಿ ಕೆಲವು ಹೊಸ ಆರ್ಥಿಕ ಹಾಗೂ ಹಣಕಾಸು ನಿಯಮಗಳು ಜಾರಿಗೆ ಬರುತ್ತವೆ. ಅದರಂತೆ, ನವೆಂಬರ್ 1ರಿಂದ ದೇಶದ ಜನಸಾಮಾನ್ಯರ ಜೇಬಿಗೆ ನೇರವಾಗಿ ಪರಿಣಾಮ ಬೀರುವ ಕೆಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಹೊಸ ಬದಲಾವಣೆಗಳು ನಿಮ್ಮ ದೈನಂದಿನ ಆರ್ಥಿಕತೆ ಮತ್ತು ಉಳಿತಾಯದ ಮೇಲೆ ಮಹತ್ವದ ಪ್ರಭಾವ ಬೀರಲಿವೆ.
- ಪಿಂಚಣಿದಾರರ ಜೀವನ ಪ್ರಮಾಣಪತ್ರ ಸಲ್ಲಿಕೆ:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿವೃತ್ತ ನೌಕರರು ಮತ್ತು ಪಿಂಚಣಿದಾರರು ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು (Life Certificate) ನವೆಂಬರ್ ತಿಂಗಳೊಳಗೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಜೀವನ್ ಪ್ರಮಾನ್ ಪೋರ್ಟಲ್ ಅಥವಾ ಬ್ಯಾಂಕ್ ಶಾಖೆಗಳ ಮೂಲಕ ಇದನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಗಡುವು ಮೀರಿದರೆ ಪಿಂಚಣಿ ಪಾವತಿಯಲ್ಲಿ ವ್ಯತ್ಯಯ ಉಂಟಾಗಬಹುದು. - ಬ್ಯಾಂಕ್ ನಾಮಿನಿ ನಿಯಮಗಳು:
ಬ್ಯಾಂಕ್ ಖಾತೆಗಳು, ಲಾಕರ್ ಗಳು ಮತ್ತು ಸುರಕ್ಷಿತ ಕಸ್ಟಡಿ ವಸ್ತುಗಳಿಗಾಗಿ ಗ್ರಾಹಕರು ಬಹು ನಾಮಿನೇಷನ್ ಗಳನ್ನು (ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ನಾಮಿನಿಗಳಾಗಿ) ಮಾಡುವ ಕುರಿತಂತೆ ಪ್ರಮುಖ ನಿಯಮಗಳು ನವೀಕೃತಗೊಳ್ಳಲಿವೆ. ಇದು ತುರ್ತು ಸಂದರ್ಭಗಳಲ್ಲಿ ಕುಟುಂಬದವರಿಗೆ ಹಣ ಪಡೆಯಲು ಸುಲಭವಾಗುವಂತೆ ರೂಪಿಸಲಾಗಿದೆ. - ಕ್ರೆಡಿಟ್ ಕಾರ್ಡ್ ಮತ್ತು ಶುಲ್ಕಗಳ ಪರಿಷ್ಕರಣ
ಕೆಲವು ಪ್ರಮುಖ ಬ್ಯಾಂಕುಗಳು ಮತ್ತು ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಮೂಲಕ ಮಾಡುವ ಪಾವತಿಗಳು ಹಾಗೂ ವ್ಯಾಲೆಟ್ ಲೋಡಿಂಗ್ ಶುಲ್ಕಗಳಲ್ಲಿ ಬದಲಾವಣೆಗಳನ್ನು ತಂದಿವೆ. ಇದರಿಂದ ನಿರ್ದಿಷ್ಟ ಹಣಕಾಸು ವ್ಯವಹಾರಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸಲಾಗುವ ಸಾಧ್ಯತೆಯಿದೆ. - ಆಧಾರ್ ಹಾಗೂ ಇತರೆ ಡಿಜಿಟಲ್ ಅಪ್ಡೇಟ್ ನಿಯಮಗಳು
ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಹೊರಡಿಸಿದ ಮಾರ್ಗಸೂಚಿಗಳಂತೆ ಆಧಾರ್ ಕಾರ್ಡ್ ಗಳಲ್ಲಿ ಬಯೋಮೆಟ್ರಿಕ್ ಅಥವಾ ಇತರ ವಿವರಗಳನ್ನು ನವೀಕರಿಸಲು ಹೊಸ ಶುಲ್ಕ ಹಾಗೂ ಪ್ರಕ್ರಿಯೆಗಳು ಅನ್ವಯವಾಗುತ್ತವೆ.


















