ಅಮರಾವತಿ: ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಂತೆಯೇ ‘ಅರ್ನಬ್’ ಅತ್ಯಂತ ತೀವ್ರ ಸ್ವರೂಪದ ಚಂಡಮಾರುತವಾಗಿ ಮಾರ್ಪಾಟಾಗಿದ್ದು, ಬುಧವಾರ ಮುಂಜಾನೆ ಆಂಧ್ರಪ್ರದೇಶ ಮತ್ತು ಯಾನಾಂ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ಸುಮಾರು ಆರು ಗಂಟೆಗಳ ಕಾಲ ಸುದೀರ್ಘವಾಗಿ ನಡೆದ ಈ ಲ್ಯಾಂಡ್ಫಾಲ್ (ತೀರ ದಾಟುವ) ಪ್ರಕ್ರಿಯೆಯು ಮುಗಿದಿದೆ ಎಂದು ಹವಾಮಾನ ಇಲಾಖೆ ದೃಢಪಡಿಸಿದೆ. ಪ್ರಸ್ತುತ ನರಸಾಪುರದಿಂದ ಪೂರ್ವಕ್ಕೆ 20 ಕಿ.ಮೀ, ಯಾನಾಂನಿಂದ ನೈಋತ್ಯಕ್ಕೆ 40 ಕಿ.ಮೀ ಹಾಗೂ ಕಾಕಿನಾಡದಿಂದ 60 ಕಿ.ಮೀ ದೂರದಲ್ಲಿ ಚಂಡಮಾರುತ ಕೇಂದ್ರೀಕೃತಗೊಂಡಿದೆ. ಕರಾವಳಿ ತೀರವನ್ನು ದಾಟುವಾಗ ಗಂಟೆಗೆ 125 ರಿಂದ 135 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿ, ಗರಿಷ್ಠ 150 ಕಿ.ಮೀ ವೇಗದ ತೀವ್ರತೆಯನ್ನೂ ತಲುಪಿತ್ತು. ತೀರ ದಾಟಿದ ನಂತರ ಬೆಳಗಿನ ವೇಳೆಗೆ ಚಂಡಮಾರುತದ ತೀವ್ರತೆ ಇಳಿಮುಖವಾಗಿದೆ.
ಆಂಧ್ರ-ಒಡಿಶಾದಲ್ಲಿ ಜನಜೀವನ ತತ್ತರ
ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅತ್ಯಧಿಕ 315 ಮಿ.ಮೀ ಮಳೆಯಾಗಿದ್ದರೆ, ವಿಜಯನಗರಂನಲ್ಲಿ 301 ಮಿ.ಮೀ, ಅನಕಾಪಲ್ಲಿಯಲ್ಲಿ 275 ಮಿ.ಮೀ, ಶ್ರೀಕಾಕುಲಂನಲ್ಲಿ 257 ಮಿ.ಮೀ ಹಾಗೂ ಕೃಷ್ಣಾ ಜಿಲ್ಲೆಯಲ್ಲಿ 223 ಮಿ.ಮೀ ಭಾರಿ ಮಳೆ ದಾಖಲಾಗಿದೆ. ಇತ್ತ ಒಡಿಶಾದ ಕೋರಾಪುಟ (188 ಮಿ.ಮೀ), ಗಂಜಾಂ (161 ಮಿ.ಮೀ) ಮತ್ತು ಗಜಪತಿ (135 ಮಿ.ಮೀ) ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಸುರಿದಿದೆ. ಸದ್ಯಕ್ಕೆ ಯಾವುದೇ ಜೀವಹಾನಿ ವರದಿಯಾಗಿಲ್ಲವಾದರೂ, ವಿದ್ಯುತ್ ಕಂಬಗಳು ಹಾಗೂ ನೂರಾರು ಬೃಹತ್ ಮರಗಳು ಧರೆಗುರುಳಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ರೈಲು ಹಾಗೂ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
1.8 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, ಹೈ ಅಲರ್ಟ್
ಮಳೆ ಹಾಗೂ ಗಾಳಿಯ ರಭಸ ಹೆಚ್ಚಾಗುವ ಮುನ್ನವೇ ಆಡಳಿತ ಯಂತ್ರ ಚುರುಕುಗೊಂಡಿದ್ದು, ಆಂಧ್ರ ಮತ್ತು ಒಡಿಶಾ ಕರಾವಳಿ ಪ್ರದೇಶಗಳಿಂದ ಸುಮಾರು 1,80,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಗುರುವಾರದವರೆಗೂ ಉಭಯ ರಾಜ್ಯಗಳಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಕರಾವಳಿ ನಿವಾಸಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ. ವಿಶಾಖಪಟ್ಟಣ ಹಾಗೂ ವಿಜಯವಾಡದ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಸಮುದ್ರದಲ್ಲಿ ಎತ್ತರದ ಭಾರೀ ಅಲೆಗಳು ಏಳುತ್ತಿರುವುದರಿಂದ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಈ ಚಂಡಮಾರುತಕ್ಕೆ ‘ಅರ್ನಬ್’ ಎಂದು ಹೆಸರಿಟ್ಟಿದ್ದು ಹೇಗೆ?
ಚಂಡಮಾರುತಕ್ಕೆ ‘ಅರ್ನಬ್’ (Arnab) ಎಂಬ ಹೆಸರನ್ನು ಬಾಂಗ್ಲಾದೇಶ ಸೂಚಿಸಿದ್ದು, ಬೆಂಗಾಲಿ ಭಾಷೆಯಲ್ಲಿ ‘ಅರ್ನಬ್’ ಎಂದರೆ ‘ಸಮುದ್ರ’ ಅಥವಾ ‘ಸಾಗರ’ ಎಂದರ್ಥ. ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ರೂಪುಗೊಳ್ಳುವ ಚಂಡಮಾರುತಗಳಿಗೆ ಹೆಸರು ನೀಡಲು ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುಎಇ ಹಾಗೂ ಯೆಮೆನ್ ಸೇರಿದಂತೆ 13 ದೇಶಗಳು ತಲಾ 13 ಹೆಸರುಗಳನ್ನು ನೀಡಿದ್ದು, ಒಟ್ಟು 169 ಹೆಸರುಗಳ ಪಟ್ಟಿಯಿಂದ ಹಂತ-ಹಂತವಾಗಿ ಹೆಸರುಗಳನ್ನು ಬಳಸಲಾಗುತ್ತದೆ.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ ಅಬ್ಬರದ ಶತಕ: ‘ಧ್ಯಾನ’ದ ಸಂಭ್ರಮಾಚರಣೆ ಕಾಲೆಳೆದ ಇಶಾನ್ ಕಿಶನ್



















