ವಾಷಿಂಗ್ಟನ್ : ನವ ಜೀವನದ ಕನಸುಗಳನ್ನು ಹೊತ್ತು ಸಪ್ತಪದಿ ತುಳಿದಿದ್ದ ಭಾರತೀಯ ಮೂಲದ ಯುವಕನೊಬ್ಬ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣಕ್ಕೀಡಾದ ಹೃದಯವಿದ್ರಾವಕ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಸಹ-ಪೈಲಟ್ (ಫಸ್ಟ್ ಆಫೀಸರ್) ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಕುಟುಂಬಕ್ಕೆ ಸೇರಿದ 26 ವರ್ಷದ ಡೇವ್ ಫಿಜಿ ಮೃತಪಟ್ಟ ದುರ್ದೈವಿ. ಹನಿಮೂನ್‌ಗೆ ತೆರಳುತ್ತಿದ್ದ ಸಂದರ್ಭದಲ್ಲೇ ಈ ಭೀಕರ ಅಪಘಾತ ನಡೆದಿದ್ದು, ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್, ಡೇವ್ ಅವರ ನವವಧು ಜೆಸ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಅಟ್ಲಾಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಭ್ರಮದ ಬೆನ್ನಲ್ಲೇ ಆವರಿಸಿದ ಶೋಕ
ದಶಕದ ಹಿಂದೆ ಚರ್ಚ್ ಒಂದರಲ್ಲಿ ಪರಿಚಯವಾಗಿದ್ದ ಡೇವ್ ಫಿಜಿ ಮತ್ತು ವೃತ್ತಿಯಲ್ಲಿ ನರ್ಸ್ ಆಗಿರುವ ಜೆಸ್ನಿ, ಪರಸ್ಪರ ಪ್ರೀತಿಸಿ ಕಳೆದ ಶುಕ್ರವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜಾರ್ಜಿಯಾದ ಡಾಸನ್‌ವಿಲ್ಲೆಯ ‘ದಿ ರಿಯರ್’ ವೆನ್ಯೂನಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಸುಮಾರು 400ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಿದ್ದರು.
ಮದುವೆಯ ರಿಸೆಪ್ಷನ್ ಮುಗಿದ ಬೆನ್ನಲ್ಲೇ ಡೌನ್‌ಟೌನ್ ಅಟ್ಲಾಂಟಾ ಹೋಟೆಲ್‌ಗೆ ತೆರಳಿ ಅಲ್ಲಿಂದ ಹನಿಮೂನ್ ಮುಂದುವರಿಸಲು ದಂಪತಿ ನಿರ್ಧರಿಸಿದ್ದರು. ಇದಕ್ಕಾಗಿ ಮದುವೆ ಮಂಟಪದಿಂದಲೇ ವಿಶೇಷ ಬೀಳ್ಕೊಡುಗೆಯಾಗಿ ರಾಬಿನ್ಸನ್ R66 ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೆ, ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮಂಟಪದ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.
ಹೆಣದ ರಾಶಿಯ ಮಧ್ಯೆ 6 ಗಂಟೆ ಕಳೆದ ನವವಧು
ಅಪಘಾತ ನಡೆದ ದಟ್ಟ ಅರಣ್ಯ ಪ್ರದೇಶಕ್ಕೆ ತಲುಪಲು ರಕ್ಷಣಾ ಸಿಬ್ಬಂದಿಗೆ ತಡವಾಗಿದ್ದರಿಂದ, ಗಾಯಗೊಂಡಿದ್ದ ನವವಧು ಜೆಸ್ನಿ ಸುಮಾರು 6 ಗಂಟೆಗಳ ಕಾಲ ಹೆಲಿಕಾಪ್ಟರ್ ಅವಶೇಷಗಳ ನಡುವೆಯೇ ಸಿಲುಕಿಕೊಂಡಿದ್ದರು. ಘಟನೆಯ ಭೀಕರತೆಯನ್ನು ನೆನೆದು ಕಣ್ಣೀರಿಟ್ಟಿರುವ ಡೇವ್ ತಂದೆ ಜಾರ್ಜ್ ಫಿಜಿ, “ಜೆಸ್ನಿಗೆ ಪ್ರಜ್ಞೆ ಬಂದಾಗ ನನ್ನ ಮಗ ಡೇವ್ ಆಕೆಯ ಮಡಿಲಲ್ಲಿ ಬಿದ್ದಿದ್ದ. ಆತನ ಮೈಯಲ್ಲಾ ರಕ್ತದಿಂದ ತೋಯ್ದು ಹೋಗಿತ್ತು. ದೇಹ ಸಂಪೂರ್ಣ ತಣ್ಣಗಾಗಿತ್ತು. ಜೆಸ್ನಿ ಸ್ವತಃ ನರ್ಸ್ ಆಗಿದ್ದರಿಂದ ಆತ ಆಗಲೇ ಮೃತಪಟ್ಟಿರುವುದು ಆಕೆಗೆ ಅರ್ಥವಾಗಿತ್ತು,” ಎಂದು ತಿಳಿಸಿದ್ದಾರೆ. ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಜೆಸ್ನಿ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಹವಾಮಾನ ವೈಪರೀತ್ಯದ ಬಗ್ಗೆ ಎಚ್ಚರಿಸಿದ್ದ ಡೇವ್
ಮೃತ ಡೇವ್ ಫಿಜಿ ಸ್ವತಃ ಕಮರ್ಷಿಯಲ್ ಪೈಲಟ್ ಆಗಿದ್ದರಿಂದ, ಹೆಲಿಕಾಪ್ಟರ್ ಹಾರಾಟಕ್ಕೂ ಮುನ್ನ ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಅವರ ತಂದೆ ಬಹಿರಂಗಪಡಿಸಿದ್ದಾರೆ. ಅಪಘಾತದ ದಿನದಂದು ಮಂಜು ಮುಸುಕಿದ ವಾತಾವರಣವಿದ್ದು, ಕಣ್ಣಿಗೆ ಏನೂ ಕಾಣದ ಪರಿಸ್ಥಿತಿ (ಜೀರೋ ವಿಸಿಬಿಲಿಟಿ) ಇತ್ತು. ಈ ವೇಳೆ ಡೇವ್ ಹೆಲಿಕಾಪ್ಟರ್ ಪೈಲಟ್‌ಗೆ, “ಇಂತಹ ಹವಾಮಾನದಲ್ಲಿ ನಾವು ಎಂದಿಗೂ ವಿಮಾನ ಹಾರಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಹೆಲಿಕಾಪ್ಟರ್ ಪೈಲಟ್ “ನಾವು ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸೋಣ, ಆಗ ಏನೂ ತೊಂದರೆಯಾಗುವುದಿಲ್ಲ” ಎಂದು ಹೇಳಿ ಹೆಲಿಕಾಪ್ಟರ್ ಚಲಾಯಿಸಿದ್ದರು ಎನ್ನಲಾಗಿದೆ. ಪ್ರಸ್ತುತ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಘಟನೆ ಬಗ್ಗೆ ತನಿಖೆ ಆರಂಭಿಸಿದ್ದು, ದುರಂತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಹವಾಮಾನ ವೈಪರೀತ್ಯ ಕಾರಣವೇ ಎಂಬುದನ್ನು ಪತ್ತೆ ಹಚ್ಚುತ್ತಿದೆ.
ಇದನ್ನೂ ಓದಿ : ‘ಭಂಡಾರ ಎರಚಿ’ ಹಣ ದೋಚಿದ ನಕಲಿ ಸಾಧುಗಳು – ಖದೀಮರನ್ನು ಬೆನ್ನಟ್ಟಿ ಹಿಡಿದ ಜನ!



















