ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೋಲಾಹಲಕ್ಕೆ ಸಂಬಂಧಿಸಿದಂತೆ ಹೊಸಪೇಟೆಯಲ್ಲಿ ಸಚಿವ ಕೆ. ಬಸವಂತಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಹಿರಿಯ ನಾಯಕರು ಮಾತನಾಡಿದ್ದು, ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಪೊಲೀಸರು ತನಿಖೆ ನಡೆಸಿ ಹೊರತರುವ ಮಾಹಿತಿ ಆಧರಿಸಿ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಸಚಿವರು, ಆ ರೀತಿ ಬ್ಲ್ಯಾಕ್ಮೇಲ್ ಮಾಡಲು ಸಾಧ್ಯವಿಲ್ಲ, ಇದರ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಟೀಕೆ ಮಾಡುತ್ತಿದ್ದು, ಅದಕ್ಕೆ ಜನರೇ ಉತ್ತರ ನೀಡಲಿದ್ದಾರೆ, ಆದರೆ ಟೀಕೆ ಮಾಡುವಾಗ ಆರೋಗ್ಯಕರ ಟೀಕೆ ಮಾಡಲಿ ಎಂದಿದ್ದಾರೆ. ಇನ್ನು ಹಿರಿಯ ನಾಯಕರ ಸ್ಟಿಂಗ್ ಆಪರೇಷನ್ ಮಾಡುವ ಕುರಿತು ಪ್ರತಿಕ್ರಿಯಿಸಿ, ಯಾರೇ ಮಾಡಿದರೂ ಆ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.


















