ನ್ಯೂಯಾರ್ಕ್: ವಿಶ್ವಪ್ರಸಿದ್ಧ ನ್ಯೂಯಾರ್ಕ್ನ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ನ ತುತ್ತತುದಿಗೆ ಅಕ್ರಮವಾಗಿ ಏರಿ, ಅಲ್ಲಿಯೇ ಪ್ರೇಮ ನಿವೇದನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ರಷ್ಯಾದ ಸಾಹಸಿ ಜೋಡಿ ಈಗ ಅಮೆರಿಕದಿಂದ ಗಡೀಪಾರಾಗುವ ಭೀತಿ ಎದುರಿಸುತ್ತಿದೆ. ಮಾಸ್ಕೋ ಮೂಲದ 33 ವರ್ಷದ ಏಂಜೆಲಾ ನಿಕೋಲೌ ಮತ್ತು 32 ವರ್ಷದ ಇವಾನ್ ಕುಜ್ನೆಟ್ಸೊವ್ ಈ ಸಂಕಷ್ಟ ಎದುರಿಸುತ್ತಿರುವ ಜೋಡಿಯಾಗಿದ್ದು, ಪ್ರಕರಣದ ವಿಚಾರಣೆಗೂ ಮುನ್ನ ಪ್ರಾಸಿಕ್ಯೂಟರ್ಗಳು ರಾಜಿ ಒಪ್ಪಂದವನ್ನು (ಪ್ರೀ-ಡೀಲ್) ಹಿಂಪಡೆದಿರುವುದು ಇವರಿಗೆ ದೊಡ್ಡ ಆಘಾತ ನೀಡಿದೆ.
ವಿಚಾರಣೆ ವೇಳೆ ಕಣ್ಣೀರಿಟ್ಟ ಯುವತಿ
ಕಳೆದ ಜುಲೈ ತಿಂಗಳಲ್ಲಿ ಈ ಜೋಡಿ ಗಗನಚುಂಬಿ ಎಂಪೈರ್ ಸ್ಟೇಟ್ ಕಟ್ಟಡದ ತುದಿಯನ್ನು ಏರಿ, “ಅಧಿಕಾರದ ಪ್ರೀತಿಯನ್ನು ಪ್ರೀತಿಯ ಶಕ್ತಿ ಮೀರಿಸಿದಾಗ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ” ಎಂಬ ಸಂದೇಶವಿದ್ದ ಧ್ವಜವನ್ನು ಪ್ರದರ್ಶಿಸಿತ್ತು. ಇದರ ಬೆನ್ನಲ್ಲೇ ಇವಾನ್ ಅವರು ಏಂಜೆಲಾ ಅವರಿಗೆ ಪ್ರೇಮ ನಿವೇದನೆ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ನ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಗಡೀಪಾರು ಭೀತಿಯಿಂದ ಏಂಜೆಲಾ ನ್ಯಾಯಾಲಯದಲ್ಲೇ ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಇವಾನ್, “ನಾವು ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿಲ್ಲ ಮತ್ತು ಯಾರ ಜೀವಕ್ಕೂ ಅಪಾಯ ತಂದೊಡ್ಡುವ ಉದ್ದೇಶ ನಮಗಿರಲಿಲ್ಲ. ಕೇವಲ ಪ್ರೀತಿಯ ಸಂದೇಶ ಸಾರಲು ಬಯಸಿದ್ದೆವು, ಈಗ ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ಸಿದ್ಧರಿದ್ದೇವೆ” ಎಂದಿದ್ದಾರೆ. “ಇಂದಿನ ಜಗತ್ತಿನಲ್ಲಿ ಸಾಕಷ್ಟು ನೋವಿದೆ. ಹೀಗಾಗಿ ಜನರ ಹೃದಯದಲ್ಲಿ ಉಳಿಯುವಂತಹ ಕಲಾತ್ಮಕ ಪ್ರದರ್ಶನದ ಮೂಲಕ ಶಾಂತಿಯ ಸಂದೇಶ ನೀಡಲು ಬಯಸಿದ್ದೆವು” ಎಂದು ಏಂಜೆಲಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೊನೆಯ ಕ್ಷಣದಲ್ಲಿ ಕೈಕೊಟ್ಟ ರಾಜಿ ಒಪ್ಪಂದ
ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಈ ಜೋಡಿ ಪ್ರಾಸಿಕ್ಯೂಟರ್ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಂತದಲ್ಲಿತ್ತು. ಸಣ್ಣಪುಟ್ಟ ಅಪರಾಧಗಳ ಅಡಿಯಲ್ಲಿ ತಪ್ಪೊಪ್ಪಿಕೊಂಡು ಗಡೀಪಾರಿನಂತಹ ಗಂಭೀರ ಪರಿಣಾಮಗಳಿಂದ ಪಾರಾಗಲು ಒಪ್ಪಂದವಾಗಿತ್ತು ಎಂದು ಜೋಡಿಯ ಪರ ವಕೀಲ ನೋಮ್ ಬಿಯಾಲೆ ತಿಳಿಸಿದ್ದಾರೆ. ಆದರೆ, ನ್ಯಾಯಾಲಯದ ವಿಚಾರಣೆಗೆ ಒಂದು ರಾತ್ರಿ ಮುನ್ನ ಮ್ಯಾನ್ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯಿಂದ ಬಂದ ಇಮೇಲ್ನಲ್ಲಿ ಈ ರಾಜಿ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ತಿಳಿಸಲಾಗಿದೆ.
ರಷ್ಯಾಕ್ಕೆ ಮರಳಿದರೆ ಯುದ್ಧ, ಜೈಲು ಶಿಕ್ಷೆಯ ಆತಂಕ
ಒಂದು ವೇಳೆ ಈ ಜೋಡಿಯನ್ನು ಅಮೆರಿಕದಿಂದ ರಷ್ಯಾಕ್ಕೆ ಗಡೀಪಾರು ಮಾಡಿದರೆ ಅವರ ಭವಿಷ್ಯ ಅತ್ಯಂತ ಅಪಾಯಕ್ಕೆ ಸಿಲುಕಲಿದೆ ಎಂದು ವಕೀಲರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಇವಾನ್ ಕುಜ್ನೆಟ್ಸೊವ್ ಅವರನ್ನು ರಷ್ಯಾಕ್ಕೆ ವಾಪಸ್ ಕಳುಹಿಸಿದರೆ, ಅವರನ್ನು ಖಚಿತವಾಗಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಕಳುಹಿಸಲಾಗುತ್ತದೆ. ಇನ್ನು ಏಂಜೆಲಾ ನಿಕೋಲೌ ಅವರ ಕಲಾತ್ಮಕ ಅಭಿವ್ಯಕ್ತಿಗಾಗಿ ರಷ್ಯಾದಲ್ಲಿ ಜೈಲಿಗೆ ತಳ್ಳುವ ಸಾಧ್ಯತೆಯಿದೆ” ಎಂದು ಬಿಯಾಲೆ ಆತಂಕ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಈ ಜೋಡಿಯ ಪ್ರೇಮಕಥೆ ಮತ್ತು ಎತ್ತರದ ಕಟ್ಟಡಗಳನ್ನು ಏರುವ ಇವರ ಅಪಾಯಕಾರಿ ಹವ್ಯಾಸದ ಕುರಿತು 2024ರಲ್ಲಿ ನೆಟ್ಫ್ಲಿಕ್ಸ್ನಲ್ಲಿ ‘ಸ್ಕೈವಾಕರ್ಸ್: ಎ ಲವ್ ಸ್ಟೋರಿ’ ಎಂಬ ಸಾಕ್ಷ್ಯಚಿತ್ರವೂ ಬಿಡುಗಡೆಯಾಗಿ ಜನಪ್ರಿಯತೆ ಪಡೆದಿತ್ತು.



















