ತೂತುಕುಡಿ : ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಸಾರ್ವಜನಿಕ ಸಭೆಯಲ್ಲಿ ಬಹಿರಂಗ ಬೆದರಿಕೆ ಹಾಕಿದ ಆರೋಪದ ಮೇಲೆ ಡಿಎಂಕೆ (DMK) ಶಾಸಕ ಜಿ.ವಿ. ಮಾರ್ಕಂಡೇಯನ್ ಅವರನ್ನು ತಮಿಳುನಾಡು ಪೊಲೀಸರು ಇಂದು (ಸೋಮವಾರ) ಬೆಳಗಿನ ಜಾವ ಬಂಧಿಸಿದ್ದಾರೆ. ಕೊವಿಲ್‌ಪಟ್ಟಿ ಪ್ರದೇಶದಲ್ಲಿ ನಡೆದ ಸಭೆಯೊಂದರಲ್ಲಿ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.
ಬೆಳ್ಳಂಬೆಳಗ್ಗೆಯೇ ಮನೆಗೆ ಮುತ್ತಿಗೆ
ವಿಲತ್ತಿಕುಳಂನಲ್ಲಿರುವ ಶಾಸಕ ಮಾರ್ಕಂಡೇಯನ್ ಅವರ ನಿವಾಸಕ್ಕೆ ಬೆಳಗಿನ ಜಾವವೇ ಆಗಮಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಈ ವಿಷಯ ತಿಳಿಯುತ್ತಿದ್ದಂತೆ ಮನೆ ಮುಂದೆ ಜಮಾಯಿಸಿದ ನೂರಾರು ಡಿಎಂಕೆ ಬೆಂಬಲಿಗರು ಸರ್ಕಾರ ಮತ್ತು ಪೊಲೀಸರ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿ, ಪೊಲೀಸ್ ವಾಹನವನ್ನು ತಡೆಯಲು ಯತ್ನಿಸಿದರು. ಬಳಿಕ ಹೆಚ್ಚುವರಿ ಬಂದೋಬಸ್ತ್ ಪಡೆದು ಪ್ರತಿಭಟನಾಕಾರರನ್ನು ತೆರವುಗೊಳಿಸಿದ ಪೊಲೀಸರು, ಶಾಸಕರನ್ನು ಎಸ್‌ಪಿ ಕಚೇರಿಗೆ ಕರೆದೊಯ್ದು ತೀವ್ರ ವಿಚಾರಣೆಗೊಳಪಡಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರದ ವಿರುದ್ಧ ಡಿಎಂಕೆ ಆಕ್ರೋಶ
ಶಾಸಕ ಮಾರ್ಕಂಡೇಯನ್ ಅವರ ಬಂಧನವನ್ನು ಡಿಎಂಕೆ ತೀವ್ರವಾಗಿ ಖಂಡಿಸಿದ್ದು, ಇದೊಂದು “ರಾಜಕೀಯ ಸೇಡಿನ ಕ್ರಮ” ಎಂದು ಆಕ್ರೋಶ ವ್ಯಕ್ತಪಡಿಸಿದೆ. “ಮೂರು ಬಾರಿಯ ಶಾಸಕರಾಗಿ ಜನಸೇವೆ ಮಾಡಿರುವ ಹಿರಿಯ ನಾಯಕರನ್ನು ಏಕಾಏಕಿ ಬಂಧಿಸಿರುವುದು ಸರ್ಕಾರದ ಅಸಹಿಷ್ಣುತೆ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಅಡಗಿಸಲು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಡಿಎಂಕೆ ನಾಯಕರು ಆರೋಪಿಸಿದ್ದಾರೆ.
ಹೋರಾಟದ ಎಚ್ಚರಿಕೆ
ಆಡಳಿತ ಪಕ್ಷದ ನಾಯಕರು ಮತ್ತು ಶಾಸಕರು ಮಾಡುವ ತಪ್ಪುಗಳನ್ನು ಕಣ್ಣುಮುಚ್ಚಿ ನೋಡುವ ಪೊಲೀಸರು, ವಿಪಕ್ಷಗಳ ವಿರುದ್ಧ ಮಾತ್ರ ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಡಿಎಂಕೆ ಪಕ್ಷ ಆರೋಪಿಸಿದೆ. ಶಾಸಕ ಮಾರ್ಕಂಡೇಯನ್ ಅವರನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿರುವ ಡಿಎಂಕೆ, ಸರ್ಕಾರದ ಈ ರಾಜಕೀಯ ಪ್ರೇರಿತ ಕ್ರಮದ ವಿರುದ್ಧ ರಾಜ್ಯಾದ್ಯಂತ ಪ್ರಜಾಸತ್ತಾತ್ಮಕವಾಗಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದೆ.
ಇದನ್ನೂ ಓದಿ : ಉಪವಾಸ ಅಂತ್ಯಕ್ಕೆ ಸೋನಮ್ ವಾಂಗ್ಚುಕ್ 3 ಷರತ್ತು : ಆಸ್ಪತ್ರೆಯಿಂದಲೇ ಕೈಬರಹದ ಪತ್ರ ಬಿಡುಗಡೆ!



















